’ಬೈಕ್ ಟ್ಯಾಕ್ಸಿ’ ನಿಷೇಧದಿಂದ ಸಾವಿರಾರು ಕುಟುಂಬಗಳು ಬೀದಿಗೆ : ಜಯರಾಮ್ ಬೇಸರ; ಬೈಕ್ ಟ್ಯಾಕ್ಸಿ ಚಾಲಕರ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಚಾಲನೆ


ವರದಿ: ನಜೀರ್ ಅಹಮದ್(9740738219) 
ಮೈಸೂರು : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು, ನಿರುದ್ಯೋಗಿಗಳಿಗೆ ವರದಾನವಾಗಿದ್ದ ಬೈಕ್ ಟ್ಯಾಕ್ಸಿ ಸೇವೆಯನ್ನು ಮುಂದುವರಿಸಲು ಸರ್ಕಾರ ಮತ್ತು ನ್ಯಾಯಾಲಯ ಸಹಾನುಭೂತಿ ತೋರಬೇಕು ಎಂದು ಮೈಸೂರು ಜಿಲ್ಲಾ ಬೈಕ್ ಟ್ಯಾಕ್ಸಿ ಸೇವಾ ಸಂಘಟನೆಯ ಅಧ್ಯಕ್ಷರಾದ ಜಯರಾಮ್ ಹೇಳಿದರು.

ಶನಿವಾರ ಪಟ್ಟಣದ ದಂಡಿ ಮಾರಮ್ಮ ದೇವಾಲಯದ ಎದುರು ಬೈಕ್ ಟ್ಯಾಕ್ಸಿ ಚಾಲಕರ ಬೆಂಗಳೂರು ಚಲೋ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮೈಸೂರು ನಗರವೊಂದರಲ್ಲೇ ಸುಮಾರು ೨ ಸಾವಿರಕ್ಕೂ ಅಧಿಕ ಊಲಾ, ಊಬರ್, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕರು ಸೇವೆ ಸಲ್ಲಿಸುತ್ತಿದ್ದರು. ಇದರಿಂದ ಅವರ ಕುಟುಂಬಗಳು ಜೀವನ ನಡೆಸಲು ಸಾಧ್ಯವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾವಂತ ಯುವಕರು ಉದ್ಯೋಗ ಸಿಗದೆ ಈ ವೃತ್ತಿ ಮಾಡುತ್ತಾ ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದರು. ಒಂದು ಕಡೆ ಸರ್ಕಾರಗಳು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ವಿಫಲವಾಗಿವೆ. ಮತ್ತೊಂದು ಕಡೆ ಯಾವುದೋ ಒಂದು ಕಡೆ ಉದ್ಯೋಗ ಗಿಟ್ಟಿಸಿಕೊಂಡು ಹೊಟ್ಟೆ ಹೊರೆಯುತ್ತಿದ್ದವರಿಗೆ ಬರೆ ಎಳೆಯುತ್ತಿದ್ದಾರೆ. ಇದು ಯಾವ ನ್ಯಾಯ, ಸರ್ಕಾರ ಮತ್ತು ನ್ಯಾಯಾಲಯಗಳು ಬೈಕ್ ಟ್ಯಾಕ್ಸಿ ನಿಷೇಧಕ್ಕೂ ಮುನ್ನ ಜನಾಭಿಪ್ರಾಯ ಸಂಗ್ರಹಿಸಬೇಕಿತ್ತು. ಜನರಿಗೆ ಯಾವುದು ಅನುಕೂಲವೋ ಅದನ್ನು ಪ್ರೋತ್ಸಾಹಿಸಬೇಕು. ನಾವು ಆಟೋಗಳಿಗಿಂತ ಶೇ.೫೦ ಕಡಿಮೆ ದರದಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದೇವೆ. ಒಬ್ಬ ಆಟೋ ಚಾಲಕ ಕನಿಷ್ಠ ಒಂದು ಸಾವಿರ ರೂ. ದುಡಿಮೆ ಮಾಡಿಕೊಂಡು ತನ್ನ ಮನೆಯ ಖರ್ಚು ವೆಚ್ಚ, ಮಕ್ಕಳ ವಿದ್ಯಾಭ್ಯಾಸ ಪೋಷಕರ ಆರೋಗ್ಯ, ಮನೆ ಬಾಡಿಗೆ, ಆಹಾರ ಖರೀದಿ ಇತ್ಯಾದಿಗಳನ್ನೆಲ್ಲವನ್ನೂ ನಿಭಾಯಿಸುತ್ತಾನೆ. ದೇಶದ ಒಂಭತ್ತು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಯಾವುದೇ ಅಡ್ಡಿ ಇಲ್ಲದೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಇದಕ್ಕೆ ನಿಷೇಧ ಹೇರಿರುವುದು ಅನ್ಯಾಯ, ಸರ್ಕಾರಗಳು ನಮಗೆ ಪರ್ಯಾಯ ಉದ್ಯೋಗವನ್ನಾದರೂ ಕಲ್ಪಿಸಿ ಎಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು ೧೦ ಸಾವಿರಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರು ಸೇರಲಿದ್ದು, ಸಾರಿಗೆ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. 

ಬಳಿಕ ಅವರು ಬೈಕ್ ಟ್ಯಾಕ್ಸಿ ಚಾಲಕರ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಅವರು ಹಸಿರು ನಿಶಾನೆ ತೋರಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮಹದೇವು. ಕೃಷ್ಣ, ಅಯಾಸ್, ಮಹೇಶ, ನಂದಕುಮಾರ್, ಹರೀಶ್, ವಿಜಯ ಕುಮಾರ್ ಸೇರಿದಂತೆ ನೂರಾರು ಚಾಲಕರು ಇದ್ದರು.


ಅಪರಾಧ ಪ್ರಕರಣಗಳಿಗೆ ಪ್ರಚೋದನೆ 

ನಿರುದ್ಯೋಗವು ಮನುಷ್ಯನಿಗೆ ಅಪರಾಧ ಕೃತ್ಯ ಎಸಗಲು ಪ್ರಚೋದನೆ ನೀಡುತ್ತದೆ. ಒಂದೆಡೆ ಬಡತನ ಮತ್ತೊಂದೆಡೆ ನಿರುದ್ಯೋಗ ಈ ನಡುವೆ ಸಿಲುಕಿದ ವಿದ್ಯಾವಂತ ಯುವಕರು ಬದುಕಲು, ಕುಟುಂಬ ನಿರ್ವಹಿಸಲು ಅಪರಾಧ ಕೃತ್ಯಗಳು, ಕಾನೂನು ಬಾಹಿರ ಚಟುವಟಿಕೆಗಳ ದಾರಿ ಹಿಡಿದು ಹಾದಿ ತಪ್ಪುತ್ತಾರೆ. ರಾಜ್ಯದ ನಿರುದ್ಯೋಗಿ ಯುವಕರಿಗೆ ಸರ್ಕಾರಗಳು ಉದ್ಯೋಗ ನೀಡದಿದ್ದರೂ ಸರಿ, ಈಗ ನಿರ್ವಹಿಸುತ್ತಿರುವ ಉದ್ಯೋಗಕ್ಕೆ ಕತ್ತರಿ ಹಾಕಬಾರದು. ಕೂಡಲೇ ಸರ್ಕಾರ ಬೈಕ್ ಟ್ಯಾಕ್ಸಿ ಕೆಲಸ ನಿರ್ವಹಿಸಲು ಸೂಕ್ತ ಕ್ರಮಕ್ಕೆ ಮುಂದಾಗಬೇಕು.


ಜಯರಾಮ್, ಮೈಸೂರು ಜಿಲ್ಲಾ ಬೈಕ್ ಟ್ಯಾಕ್ಸಿ ಸೇವಾ ಸಂಘಟನೆಯ ಅಧ್ಯಕ್ಷರು.

ಬೈಕ್ ಟ್ಯಾಕ್ಸಿ ಚಾಲಕರ ಬೆಂಗಳೂರು ಚಲೋ 

ಜಾಥಾಕ್ಕೆ ಮೈಸೂರಿನಲ್ಲಿ ಪೊಲೀಸರ ನಿರ್ಬಂಧ


ಮೈಸೂರು : ಬೈಕ್ ಟ್ಯಾಕ್ಸಿ ನಿಷೇಧ ಹಿಂಪಡೆಯುವಂತೆ ಒತ್ತಾಯಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಮೈಸೂರಿನಿಂದ ಬೆಂಗಳೂರಿಗೆ ಹೊರಟ್ಟಿದ್ದ ಬೈಕ್ಸ್ ಟ್ಯಾಕ್ಸಿ ಚಾಲಕರ ಜಾಥಾಕ್ಕೆ ಪೊಲೀಸರು ನಿರ್ಬಂಧ ವಿಧಿಸಿದರು ಎಂದು ಸಂಘಟನೆಯ ಮಹದೇವು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ೮.೩೦ಕ್ಕೆ ನಮ್ಮ ೧೫೦ಕ್ಕೂ ಹೆಚ್ಚು ಜನರ ಒಂದು ತಂಡ ಬೆಂಗಳೂರಿಗೆ ಹೊರಟಿತ್ತು, ೯ ಗಂಟೆ ನಂತರ ಮತ್ತೊಂದು ತಂಡವನ್ನು ಹೊರಡಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಜಾಥಾಕ್ಕೆ ಅನುಮತಿ ಪಡೆದಿಲ್ಲ, ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಸಂಬಂಧ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದ್ದು, ಜಾಥಾಕ್ಕೆ ಅನುಮತಿ ಪಡೆಯದ ಕಾರಣ ನಮ್ಮ ಮತ್ತೊಂದು ತಂಡವನ್ನು ತಡೆಹಿಡಿದರು ಎಂದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು