ಪಯಣ ಕಾರ್ ಮ್ಯೂಸಿಯಂನಲ್ಲಿ ಯಶಸ್ವಿಯಾಗಿ ಜರುಗಿದ 11ನೇ ಅಂತಾರಾಷ್ಟ್ರೀಯ ಯೋಗದ ದಿನಾಚರಣೆ
ವರದಿ:ನಜೀರ್ ಅಹಮದ್(9740738219)
ಮೈಸೂರು: ಯೋಗ ಎಂಬುದು ಮನುಷ್ಯನಿಗೆ ಶಾಂತಿ, ನೆಮ್ಮದಿ, ಸಂತೋಷ ಮತ್ತು ಆರೋಗ್ಯವನ್ನು ಕೊಡುವ ಮಹಾನ್ ಪ್ರಕ್ರಿಯೆ ಎಂದು ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾ ವಿದ್ಯಾಲಯ ಮತ್ತು ಆಯುಷ್ ಮಂತ್ರಾಲಯದ ಸಹಯೋಗದೊಂದಿಗೆ ಮೈಸೂರು ಹೊರವಲಯದಲ್ಲಿರುವ ಪಯಣ ಕಾರ್ ಮ್ಯೂಸಿಯಂ ಆವರಣದಲ್ಲಿ ಏರ್ಪಡಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನಾಂಗವು ಇಂದು ಮೊಬೈಲ್, ಟಿವಿ, ಗ್ಯಾಜೆಟ್ ಸೇರಿದಂತೆ ವಿವಿಧ ಆಧುನಿಕ ಮಾಧ್ಯಮಗಳಲ್ಲಿ ಬೆರೆತು ತಮ್ಮ ಮಾನಸಿಕ ಶಾಂತಿಯನ್ನು ಕಳೆದುಕೊಳ್ಳುತ್ತಿದೆ. ಮನುಷ್ಯ ತನ್ನ ಜೀವನವನ್ನು ನಿರಂತರವಾಗಿ ಆನಂದಮಯವಾಗಿ ಶಾಂತಿಯುತವಾಗಿ ಕಳೆಯಬೇಕಾದಲ್ಲಿ ಯೋಗದ ಮೊರೆ ಹೋಗಬೇಕು ದಿನನಿತ್ಯ ನಾವು ಬೆಳಗ್ಗೆ ಮತ್ತು ಸಂಜೆ ಕೇವಲ ಅರ್ಧ ಗಂಟೆ ಕ್ರಮಬದ್ಧವಾಗಿ ಯೋಗಾಸನ ಮಾಡಿದರೆ ನಮ್ಮ ದೇಹದಲ್ಲಿ ಬದಲಾವಣೆ ಕಾಣಬಹುದು. ದಿನೇ ದಿನೇ ನಮ್ಮ ದೈಹಿಕ ಆರೋಗ್ಯದ ಜತೆ, ಮಾನಸಿಕ ಶಾಂತಿಯನ್ನು ಪಡೆಯಬಹುದು ಎಂದರು.
ಯೋಗ ಇಂದು ದೇಶ, ಭಾಷೆ ಮೀರಿ ಬೆಳೆದಿದೆ. ದೇಹ ಮನಸ್ಸು ಮತ್ತು ಬುದ್ಧಿಗೆ ಪುಷ್ಠಿ ಕೊಡುವ ಅಧ್ಯಾತ್ಮಿಕ ಯೋಗ ಮಾರ್ಗದಲ್ಲಿ ನಾವು ಸಾಗಬೇಕಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳು ಈ ಬೃಹತ್ ಯೋಗ ಕಾರ್ಯಕ್ರಮ ಏರ್ಪಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಸಹ ಸಂಪಾದಕರಾದ ಕೆ.ಶಿವಕುಮಾರ್ ಮಾತನಾಡಿ, ಮೈಸೂರು ಯೋಗಕ್ಕೆ ಪ್ರಸಿದ್ಧಿಯಾದ ನಗರವಾಗಿದೆ, ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ಯೋಗಕ್ಕೆ ಮೈಸೂರಿನ ಕೊಡುಗೆ ಅಪಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ಪ್ರೋತ್ಸಾಹ ನೀಡುವ ಮೂಲಕ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದೆ. ದೇಶ, ಭಾಷೆ ಪ್ರಾಂತ್ಯ ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಯೋಗ ಬೆಳದಿದೆ ಎಂದರು.
ಶನಿವಾರ ಬೆಳಗ್ಗೆ 7.15ಕ್ಕೆ ಯೋಗ ಕಾರ್ಯಕ್ರಮ ಜರುಗಿತು, ವಿವಿಧ ಶಾಲಾ ಕಾಲೇಜುಗಳು ಮತ್ತು ಗ್ರಾಪಂಗಳ 3000ಕ್ಕೂ ಹೆಚ್ಚು ಯೋಗ ಪಟುಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಯೋಗಪಟು ಕು.ಚಿನ್ಮಯಿ ಅವರಿಗೆ ಯೋಗರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಮಹಾರುದ್ರಸ್ವಾಮಿ ಅವರು ಬರೆದಿರುವ ಪ್ರಿನ್ಸಿಪಲ್ ಆಫ್ ಯೋಗ ಪುಸ್ತಕವನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು.
ವಿವಿಧ ಪ್ರಖ್ಯಾತ ಯೋಗಪಟುಗಳು ವೇದಿಕೆಯಲ್ಲಿ ಯೋಗ ಪ್ರದರ್ಶನ ನೀಡಿ ಗಮನಸೆಳೆದರು.
ಕಾರ್ಯಕ್ರಮದಲ್ಲಿ ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಎ.ದೇವರಾಜು ಅವರು ಯೋಗದ ಮಹತ್ವ ಕುರಿತು ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮದಲ್ಲಿ ಅನುಪಸ್ಥಿತರಿದ್ದರೂ ವಚ್ರ್ಯೂವೆಲ್ ಆಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಡಾ.ಬಿ.ಶಶಿಕಾಂತ್ ಜೈನ್, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರಶಾಂತ್ ಶೆಟ್ಟಿ, ಡಾ.ನರೇಂದ್ರ ಕೆ.ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಯೋಗಕ್ಕೆ ಇಂದು ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಪ್ರಪಂಚವೆಲ್ಲ ಒಂದು, ನಾವೆಲ್ಲ ಒಂದೇ ಭೂಮಿಯ ಮಕ್ಕಳು ಎಂಬ ಐಕ್ಯತಾಮನೋಭಾವ ಮೂಡುತ್ತಿದೆ. ಯೋಗ ಕೇವಲ ವ್ಯಾಯಾಮವಲ್ಲ, ಯೋಗದಿಂದ ಆಂತರಿಕ ವೈರಾಗ್ಯ ಸಾಧಿಸಬಹುದು. ಯೋಗವು ಯುವಜನಾಂಗವನ್ನು ದುಶ್ಚಟದಿಂದ ದೂರ ಮಾಡಿ ಉತ್ತಮ ಸಮಾಜ ನಿರ್ಮಿಸುವ ಶಕ್ತಿಯನ್ನು ಹೊಂದಿದೆ.
ಶ್ರೀ ಡಿ.ವೀರೇಂದ್ರೆ ಹೆಗ್ಗಡೆ, ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ
ಬಹಳಷ್ಟು ಉದ್ಯೋಗಿಗಳು ಇಂದು ತಮ್ಮ ಕೆಲಸಗಳ ಒತ್ತಡವನ್ನು ನಿಭಾಯಿಸಲಾಗದೆ ತಮ್ಮ ಉದ್ಯೋಗಗಳಿಗೆ ರಾಜೀನಾಮೆ ಕೊಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಯುವ ಜನಾಂಗ ಡ್ರಗ್ಸ್‍ಗಳಿಗೆ ಬಲಿಯಾಗುತ್ತಿದೆ. ಇದೆಲ್ಲವನ್ನೂ ತಪ್ಪಿಸಲು ಮುಂದಿನ ಪೀಳಿಗೆಯನ್ನು ರೋಗ ಮತ್ತು ಒತ್ತಡ ಮುಕ್ತ ಜನಾಂಗವಾಗಿ ರೂಪಿಸಲು ಯೋಗ ಎನ್ನುವುದು ಶಿಕ್ಷಣದ ಒಂದು ಭಾಗವಾಗಬೇಕು, ಯೋಗದ ಬಗ್ಗೆ ಶಾಲೆಗಳಲ್ಲಿ ಪಠ್ಯವನ್ನು ರೂಪಿಸಿ ಬಾಲ್ಯದಲ್ಲೆ ಮಕ್ಕಳಲ್ಲಿ ಯೋಗದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು.
• ಕೆ.ಶಿವಕುಮಾರ್, ಸಹ ಸಂಪಾದಕರು, ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್
0 ಕಾಮೆಂಟ್‌ಗಳು