ಕೋಮುವಾದದ ವಿರುದ್ಧ ’ಸೌಹಾರ್ದ ನಡಿಗೆ’ಗೆ ಚಾಲನೆ: ಪರಸ್ಪರ ಕೈ ಹಿಡಿದು ಸಾಗಿದ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು

 ವರದಿ: ನಜೀರ್ ಅಹಮದ್(9740738219)

ಮೈಸೂರು: ಕೋಮುವಾದದ ವಿರುದ್ಧ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಆಯೋಜಿಸಿರುವ 12 ದಿನಗಳ ಸೌಹಾರ್ಧ ನಡಿಗೆ ಕಾರ್ಯಕ್ರಮಕ್ಕೆ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಮೈಸೂರಿನಲ್ಲಿ ಭಾನುವಾರ ಬೆಳಗ್ಗೆ ಚಾಲನೆ ನೀಡಿದರು.

ನಗರದ ಫೌಂಟೆನ್ ವೃತ್ತದಿಂದ ಸಂತ ಫಿಲೋಮಿನಾ ಚರ್ಚ್‍ವರೆಗೆ ಹಿಂದೂ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗುರುಗಳು ಪರಸ್ಪರ ಕೈ..ಕೈ ಹಿಡಿದು ನೂರಾರು ಜನರೊಂದಿಗೆ ಸೌಹಾರ್ಧ ನಡಿಗೆ ಮೂಲಕ ಗಮನ ಸೆಳೆದರು.

ಚರ್ಚ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಮಾತನಾಡಿ, ಧರ್ಮದ ಹೆಸರಲ್ಲಿ ಬೆಂಕಿ ಇಡುವವರನ್ನು ದೂರವಿಡಬೇಕು. ಇವರಿಂದ ಇಡೀ ದೇಶಕ್ಕೆ ಅಪಾಯ, ಭಾರತ ಜಾತ್ಯತೀತ ದೇಶವಾಗಿದೆ. ಭಾರತೀಯರೆಲ್ಲಾ ಒಂದು ಎಂದು ನಾವು ತಿಳಿದುಕೊಳ್ಳಬೇಕು. ದೇಶಕ್ಕಿಂತ ಧರ್ಮ ಜಾತಿ ದೊಡ್ಡದಲ್ಲ, ಧರ್ಮ ಜಾತಿ ದೊಡ್ಡದು ಎಂದರೆ ಇಡೀ ದೇಶದ ಅಖಂಡತೆ ನಾಶವಾಗಿ ದೇಶವನ್ನೆ ಅಪಾಯಕ್ಕೆ ದೂಡಿದಂತೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಹೇಳಿದ್ದಾರೆ. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸುವುದು, ಆಯುಧಗಳನ್ನು ಹಿಡಿಯುವುದು ಅಪಾಯಕಾರಿ ಬೆಳವಣಿಗೆ. ನಮ್ಮ ಆದರ್ಶಗಳು ಮಾತನಾಡಬೇಕು, ಆಯುಧಗಳಲ್ಲ ಎಂದು ಸ್ವಾಮೀಜಿ ಸಲಹೆ ನೀಡಿದರು.

ನಮ್ಮ ನಡೆ ಸೌಹಾರ್ಧದ ಕಡೆಗೆ ಹೋಗಬೇಕು, ಸಂವಿಧಾನವೇ ನಮ್ಮ ಪರಮೋಚ್ಛ ಧರ್ಮಗ್ರಂಥವಾಗಿದೆ. ನಮ್ಮ ಧರ್ಮಗ್ರಂಥಗಳು ನಮ್ಮ ಆಚರಣೆಗಳಿಗೆ ಮಾತ್ರ ಇಟ್ಟುಕೊಳ್ಳೋಣ ಎಂದವರು ಹೇಳಿದರು.

ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಅಜೀಜುಲ್ಲಾ(ಅಜ್ಜು) ಅವರು ಮಾತನಾಡಿ, ರಾಜಕೀಯ ಗದ್ದುಗೆಗಾಗಿ ದೇಶದಲ್ಲಿ ವಿಷಬೀಜ ಬಿತ್ತಲಾಗುತ್ತಿದೆ. ಕೆಲವು ವ್ಯಕ್ತಿಗಳು ಸುಳ್ಳುಗಳನ್ನು ಹೇಳುತ್ತಾ ದೇಶದ ಸೌಹಾರ್ಧತೆಯನ್ನು ಹಾಳುಮಾಡುತ್ತಿದ್ದಾರೆ. ಬ್ರಿಟೀಷರನ್ನು ದೇಶದಿಂದ ಓಡಿಸುವಾಗ ನಮ್ಮಲ್ಲಿ ಯಾವುದೇ ಜಾತಿ ಧರ್ಮದ ಭೇದ ಇರಲಿಲ್ಲ, ಹಾಗೆಯೇ ಕೋಮುವಾದಿಗಳನ್ನು ಓಡಿಸಲು ನಾವೆಲ್ಲಾ ಒಗ್ಗಟ್ಟಾಗಬೇಕು ಎಂದು ಹೇಳಿದರು.

ಸುನ್ನಿ ಸ್ಟೂಡೆಂಟ್ ಫೆಡರೇಷನ್ ಅಧ್ಯಕ್ಷರಾದ ಹಾಫೀಜ್ ಸುಫೀಯಾನ್ ಸಖಾಫಿ ಮಾತನಾಡಿ, ರಾಜಕೀಯ ಅಧಿಕಾರಕ್ಕಾಗಿ ಧರ್ಮಗಳ ಹೆಸರಲ್ಲಿ ಕೆಲವರು ನಮ್ಮ ನಮ್ಮಲ್ಲಿ ಒಡಕು ಉಂಟುಮಾಡುತ್ತಿದ್ದಾರೆ. ಇಂತಹವರನ್ನು ದೂರ ಇಡಬೇಕು. ಧರ್ಮಗಳು ಎಲ್ಲರನ್ನೂ ಬೆಸೆಯುತ್ತವೆ, ಆದರೇ, ಕೆಲವರು ಮಾತ್ರ ಧರ್ಮದ ಹೆಸರಲ್ಲಿ ಮನುಷ್ಯ-ಮನುಷ್ಯರ ನಡುವೆ ಅಂತರ ಸೃಷ್ಟಿಸಿ ಸೌಹಾರ್ಧತೆ ಹಾಳು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಇಡೀ ರಾಜ್ಯಾದ್ಯಂತ 12 ದಿನಗಳ ಕಾಲ ಪ್ರವಾಸ ಮಾಡಿ ಪ್ರಮುಖ ನಗರಗಳಲ್ಲಿ ಸರ್ವ ಧರ್ಮಗಳ ಗುರುಗಳ ಜತೆ ಸೌಹಾರ್ಧ ನಡಿಗೆ ನಡೆಸಿ ಪ್ರೀತಿಯನ್ನು ಬೆಸೆಯುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಸಮಿಯುಲ್ಲಾ, ಕಿರಣ್ ಕುಮಾರ್, ಫಾದರ್ ಸೆಲ್ವಕುಮಾರ್, ಮೊಹಮ್ಮದ್ ಅಲಿ, ಅಶ್ರಫ್ ಸಖಾಫಿ, ಉಮರ್ ಅಲಿ, ಧರ್ಮಗುರು ಸಲಾಂ ರಜ್ವಿ, ಫಾರೂಖ್ ರಜ್ವಿ, ಸೈಯದ್ ಅಲವಿ ಹಸೇನಿ, ಅಬ್ಸಲ್ ಮುಂತಾದವರು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು