ಮೈಸೂರು: ನಗರದ ವಿದ್ಯಾರಣ್ಯ ಪುರಂನಲ್ಲಿರುವ ಪುರಿ ಜಗನ್ನಾಥ ದೇವಾಲಯದಲ್ಲಿ ಶುಕ್ರವಾರ ಸಂಜೆ ಪುರಿ ಜಗನ್ನಾಥ್ ಕಲ್ಚರಲ್ ಅಂಡ್ ವೆಲ್‌ಫೇರ್ ಟ್ರಸ್ಟ್‌ನಿಂದ ಪ್ರಧಾನ ಅರ್ಚಕರಾದ ಘನಶ್ಯಾಮ್ ಪ್ರಧಾನ್ ನೇತೃತ್ವದಲ್ಲಿ ಜಗನ್ನಾಥ ಸ್ವಾಮಿಯ ರಥಯಾತ್ರೆ ವಿಜೃಂಭಣೆಯಿಂದ ಜರುಗಿತು.
ಸಾವಿರಾರು ಭಕ್ತರು ರಥವನ್ನು ಎಳೆದು ಜಗನ್ನಾಥನ ಕೃಪೆಗೆ ಪಾತ್ರರಾದರು.
ಜೂನ್ ೧೦ ರಂದು ಸ್ನಾನ ಪೂರ್ಣಿಮೆಯ ದಿನ ಪುರಿ ಜಗನ್ನಾಥನಿಗೆ ಶ್ರದ್ಧಾ ಭಕ್ತಿಯಿಂದ ಮಜ್ಜನ ಮಾಡಿಸಲಾಗಿತ್ತು. ಅಂದು ಬೆಳಗ್ಗೆ ೧೧ ಗಂಟೆಗೆ ಕಲಶ ಹೊತ್ತ ನೂರಾರು ಮಹಿಳೆಯರು ದೇವಾಲಯದಿಂದ ಮಂಗಳ ವಾದ್ಯಗಳ ಮೆರವಣಿಗೆ ಮೂಲಕ ಹೊರಟು ಮಡಿಕೆಗಳಲ್ಲಿ ಶುದ್ಧ ನೀರನ್ನು ಹೊತ್ತು ತಂದು ಮಂಗಳವಾದ್ಯಗಳ
ಸದ್ದಿನೊಂದಿಗೆ ಜಗನ್ನಾಥ ಸ್ವಾಮಿಗೆ ಮಜ್ಜನ ಮಾಡಿಸಿದ್ದರು. ಸ್ನಾನದ ಬಳಿಕ ಸ್ವಾಮಿಗೆ ಜ್ವರ ಬರುವ ಕಾರಣ ೧೫ ದಿನಗಳ ಕಾಲ ಸ್ವಾಮಿಯ ಮೂರ್ತಿಯನ್ನು ಏಕಾಂತದಲ್ಲಿ ಇಡಲಾಗಿತ್ತು. ಯಾರಿಗೂ ದರ್ಶನ ನೀಡಿರಲಿಲ್ಲ, ಈ ವೇಳೆ ಸ್ವಾಮಿಗೆ ಕಷಾಯಗಳ ನೈವೇದ್ಯ
ನೀಡಲಾಗಿತ್ತು. ೧೫ ದಿನಗಳ ಬಳಿಕ ಜೂ.೨೭ ರಂದು ಶುಕ್ರವಾರ ಸ್ವಾಮಿಯನ್ನು ಏಕಾಂತದಿಂದ ಹೊರತಂದು ನಿಯಮಾನುಸಾರ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಬಳಿಕ ಸಮೀದಲ್ಲಿರುವ ಲೈಬ್ರರಿ ಪಾರ್ಕಿನಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಈ ಪದ್ದತಿಯು ಪುರಿ ಜಗನ್ನಾಥ ದೇವಾಲಯದಲ್ಲಿ ಸಾವಿರಾರು ವರ್ಷಗಳಿಂದಲೂ ನಡೆದು ಬಂದಿದ್ದು, ಅದೇ ರೀತಿ ಮೈಸೂರಿನಲ್ಲೂ ಆಚರಣೆ ಮಾಡಲಾಗುತ್ತಿದೆ ಎಂದು ಪ್ರಧಾನ ಅರ್ಚಕರು ಹಾಗೂ ಪುರಿ ಜಗನ್ನಾಥ್ ಕಲ್ಚರಲ್ ಅಂಡ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷರೂ ಆದ ಘನಶ್ಯಾಮ್ ಪ್ರಧಾನ್ ಹೇಳಿದರು.
ಒಡಿಶಾ ರಾಜ್ಯದಲ್ಲಿರುವ ಪುರಿ ಜಗನ್ನಾಥ ದೇವಾಲಯದಲ್ಲಿ ನಡೆಯುವ ಪೂಜಾ ವಿಧಿ ವಿಧಾನಗಳ ರೀತಿಯಲ್ಲೇ ಇಲ್ಲಿಯೂ ಜಗನ್ನಾಥ ಸ್ವಾಮಿಗೆ ಪೂಜೆ ಮಾಡಲಾಗುವುದು. ಇಂದಿನಿಂದ ಎಂಟು ದಿನಗಳ ಕಾಲ ಸೆಂಟ್ರಲ್ ಲೈಬ್ರರಿ ಪಾರ್ಕಿನಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಮತ್ತು ವಿಶೇಷ ಪೂಜೆಗಳಿಗೆ ಅವಕಾಶವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ದೇವಾಲಯದಲ್ಲಿ ನೂರಾರು ಮಹಿಳೆಯರಿಂದ ಭಜನೆ ಕಾರ್ಯಕ್ರಮವೂ ನಡೆಯಿತು. ಪ್ರಮುಖರಾದ ಬಸುದೇಬ ಪ್ರಧಾನ, ಜಿ.ಎಂ.ಗೋಪಾಲಕೃಷ್ಣ, ಜೈಶಂಕರ್, ಬಿ.ಎನ್.
ಈಶ್ವರ್ ಮುಂತಾದವರು ಹಾಜರಿದ್ದರು.
0 ಕಾಮೆಂಟ್‌ಗಳು