ಮೈಸೂರು : ರಾಜ್ಯ ಸರ್ಕಾರ ಕೆಆರ್‍ಎಸ್ ಜಲಾಶಯದ ಬಳಿ ನಿರ್ಮಿಸಲು ಉದ್ದೇಶಿಸಿರುವ ಅಮ್ಯೂಸ್‍ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ಯೋಜನೆಗೆ ಕರ್ನಾಟಕ ರಾಜ್ಯ ರೈತಸಂಘ(ರೈತಬಣ) ಷರತ್ತು ಬದ್ಧ ಬೆಂಬಲ ವ್ಯಕ್ತಪಡಿಸಿದೆ. .
ಈ ಬಗ್ಗೆ ಸಂಘಟನೆಯ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಭೂಮಿ ತಾಯಿಯನ್ನು ನಂಬಿ ಒಕ್ಕಲುತನ ಮಾಡುತ್ತಿರುವ ಕನ್ನಂಬಾಡಿ ಕಟ್ಟೆ ಜಲಾಶಯದ ವ್ಯಾಪ್ತಿಯ ರೈತರಾದ ನಾವು ಕಾವೇರಿ ನದಿಯನ್ನು ಸಹ ತಾಯಿಯ ರೂಪದಲ್ಲಿ ಕಾಣುತ್ತಿದ್ದೇವೆ. ಸಾವಿರಾರು ಜನರಿಗೆ ಅನ್ನ ಕೊಡುವ ಭೂಮಿಗೆ ನೀರುಣಿಸುವ ಕಾವೇರಿ ತಾಯಿಗೆ ಆರತಿ ಎತ್ತಿದರೆ ತಪ್ಪೇನು? ಇದರಲ್ಲಿ ಮೌಢ್ಯದ ಮಾತೇ ಇಲ್ಲ. ಇನ್ನು ಕಾವೇರಿ ಆರತಿ ಯೋಜನೆ ಅನುಷ್ಠಾನಕ್ಕೆ ಬಂದರೆ ಈ ಭಾಗದಲ್ಲಿ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಿ ಸ್ಥಳಿಯ ವ್ಯಾಪಾರಿಗಳು, ಉದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರು ಆರ್ಥಿಕವಾಗಿ ಸಬಲರಾಗುತ್ತಾರೆ. ದೂರದೃಷ್ಟಿಯಿಂದಲೂ ಈ ಯೋಜನೆ ಈ ಭಾಗದ ರೈತರ, ಜನಸಾಮಾನ್ಯರ, ಕೂಲಿ ಕಾರ್ಮಿಕರ, ಉದ್ಯಮಿಗಳ, ವ್ಯಾಪಾರಸ್ಥರ ಆರ್ಥಿಕ ಪುನಶ್ಚೇನಕ್ಕೆ ಸಹಕಾರಿಯಾಗುತ್ತದೆ.
ಅಲ್ಲದೇ ಮಂಡ್ಯ, ಮೈಸೂರು ಜಿಲ್ಲೆಯ ರೈತರು ಕೃಷಿಗಾಗಿ ಕಾವೇರಿ ನೀರು ಬಳಸಿದರೆ, ಬೆಂಗಳೂರಿನಲ್ಲಿರುವ ಇಡೀ ದೇಶದ ಜನರು ಇದನ್ನು ಕುಡಿಯಲು ಬಳಸುತ್ತಾರೆ. ಇದರಿಂದ ಇಡೀ ದೇಶದ ಜನರು ಕಾವೇರಿ ನದಿಯ ಋಣದಲ್ಲಿದ್ದಾರೆ. ಎಲ್ಲರಿಗೂ ಕಾವೇರಿ ನದಿಯ ಬಗ್ಗೆ ಪೂಜ್ಯ ಭಾವನೆ ಇದೆ. ಇದರಲ್ಲಿ ಮೌಢ್ಯ ಎನ್ನುವುದರಲ್ಲಿ ಹುರುಳಿಲ್ಲ ಎಂದು ಹೇಳಿದರು.
ಇನ್ನು ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡುವುದರಿಂದಲೂ ಸಹ ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಈ ಭಾಗದ ರೈತಾಪಿ ಜನರಲ್ಲಿ ಆರ್ಥಿಕ ಚೇತನ ಮೂಡುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಆದಷ್ಟು ಬೇಗ ಈ ಯೋಜನೆಯನ್ನು ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣಕ್ಕೂ ಮುನ್ನ ಜಲಾಶಯದ ಭದ್ರತೆ ಬಗ್ಗೆ ತಜ್ಞರಿಂದ ವರದಿ ಪಡೆದು ಕಾಮಗಾರಿ ನಡೆಸಬೇಕು.
ಅಲ್ಲದೇ, ಅಮ್ಯೂಸ್‍ಮೆಂಟ್ ಪಾರ್ಕಿನಲ್ಲಿ ಸೃಷ್ಟಿಯಾಗುವ ಎಲ್ಲ ಉದ್ಯೋಗಗಳು ಮಂಡ್ಯ, ಮೈಸೂರು ಮತ್ತು ಕೊಡಗು ಜಿಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಕಡ್ಡಾಯವಾಗಿ ನೀಡಬೇಕು ಎಂದೂ ಸಹ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದರು.
0 ಕಾಮೆಂಟ್‌ಗಳು