ಮೈಸೂರು : ಆಷಾಡ ಶುಕ್ರವಾರಗಳಂದು ವಿಐಪಿ ದರ್ಶನಕ್ಕೆ 2 ಸಾವಿರ ರೂ ಟಿಕೆಟ್ ನಿಗದಿ ಮಾಡುವ ಮೂಲಕ ರಾಜ್ಯ ಸರ್ಕಾರ ಚಾಮುಂಡೇಶ್ವರಿ ಭಕ್ತರಿಂದಲೂ ಸುಲಿಗೆ ಮಾಡಲು ಮುಂದಾಗಿದ್ದು, ಕೂಡಲೇ 2 ಸಾವಿರ ರೂ. ವಿಐಪಿ ದರ್ಶನದ ಟಿಕೆಟ್ ರದ್ದು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದ್ದಾರೆ.
ಸೋಮವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ,
ಮಾತೆತ್ತಿದರೆ ಸಮಾನತೆ, ಸಮ ಸಮಾಜ, ತಾರತಮ್ಯ ಬೇಡ ಎಂದು ಹೇಳುವ ಈ ಸರ್ಕಾರ ಮತ್ತು ಅದರ ಸಚಿವರು, ಚಾಮುಂಡೇಶ್ವರಿ ದರ್ಶನದ ವಿಚಾರದಲ್ಲಿ ವಿಐಪಿ ದರ್ಶನಕ್ಕೆ 2 ಸಾವಿರ ರೂ. ಟಿಕೆಟ್ ನಿಗದಿ ಮಾಡುವ ಮೂಲಕ ಶ್ರೀಮಂತರು ಮತ್ತು ಜನ ಸಾಮಾನ್ಯರ ನಡುವೆ ಸರ್ಕಾರಗಳೇ ತಾರತಮ್ಯ ಹುಟ್ಟುಹಾಕುತ್ತಿವೆ. ಚಾಮುಂಡೇಶ್ವರಿ ದೇವಾಲಯದ ನಿರ್ಮಾತೃಗಳಾದ ಮೈಸೂರಿನ ರಾಜ ಮಹಾರಾಜರು ಇಂತಹ ಯಾವುದೇ ತಾರತಮ್ಯಗಳನ್ನು ಈ ಹಿಂದೆಯೂ ಹುಟ್ಟು ಹಾಕಿರಲಿಲ್ಲ, ಸರ್ಕಾರಗಳು ದೇವರ ದರ್ಶನದಲ್ಲಿ ತಾರತಮ್ಯ ಹುಟ್ಟು ಹಾಕುತ್ತಿವೆ. ಎಲ್ಲರಿಗೂ ಒಂದೇ ರೀತಿಯಲ್ಲಿ ದರ್ಶನ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಚಾಮುಂಡಿ ಬೆಟ್ಟದಲ್ಲಿ ಸ್ಥಳೀಯ ನಿವಾಸಿಗಳಿಗೆ ಕುಡಿಯುವ ನೀರು, ಆಷಾಢದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ, ಇಲ್ಲಿ ಸುಸಜ್ಜಿತ ಶೌಚಾಲಯಗಳಾಗಲಿ, ಹೊರಗಿನಿಂದ ಬರುವವರಿಗೆ ಮಡಿಯಾಗಿ ದೇವರ ದರ್ಶನ ಮಾಡಲು ಸ್ನಾನದ ಗೃಹಗಳಾಗಲಿ ಇಲ್ಲವೇ ಇಲ್ಲ. ಈಗಿರುವ ಒಂದೇ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ 5 ರೂ ಹಾಗೂ ಮಲ ವಿಸರ್ಜನೆ 10 ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ಇದನ್ನು ಉಚಿತ ಮಾಡಬೇಕು. ಈಗ ಆಷಾಢದಲ್ಲಂತೂ ಲಕ್ಷಾಂತರ ಭಕ್ತಾದಿಗಳು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಸಮಯದಲ್ಲಿ ಸರ್ಕಾರ ಇವುಗಳ ಬಗ್ಗೆ ಗಮನ ಹರಿಸಿ ಮೂಲಭೂತ ಸೌಕರ್ಯಗಳನ್ನು ಈ ಕೂಡಲೇ ಕಲ್ಪಿಸಬೇಕು.
ಅಲ್ಲದೇ, ಚಾಮುಂಡೇಶ್ವರಿ ದೇವಿಯ ಸೇವೆಗಳ ಶುಲ್ಕಗಳನ್ನು ಸಹ ಏಕಾಏಕೀ ಅತೀ ಹೆಚ್ಚು ಏರಿಕೆ ಮಾಡಿದೆ. ಚಾಮುಂಡಿ ಬೆಟ್ಟದಲ್ಲಿ ಸರಿಯಾಗಿ ಕುಡಿಯುವ ನೀರೇ ಇಲ್ಲ. 5-6 ದಿನಗಳಿಗೊಮ್ಮೆ ಇಲ್ಲಿ ನೀರನ್ನು ಬಿಡಲಾಗುತ್ತಿದೆ. ಕೆಲವು ವರ್ಷಗಳ ಹಿಂದೆಯೇ ಕುಡಿಯುವ ನೀರಿಗಾಗಿ ಬೆಟ್ಟಕ್ಕೆ ಹೊಸ ಪೈಪ್‍ಲೈನ್ ಅನ್ನು ಹಾಕಲು ಕಾಮಗಾರಿ ಶುರು ಮಾಡಿದರೂ, ಇನ್ನೂ ಪೂರ್ಣವಾಗಿ ಕೆಲಸ ಮುಗಿದಿಲ್ಲದ ಪರಿಣಾಮ ಬೆಟ್ಟದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಸರ್ಕಾರ ಇಷ್ಟೆಲ್ಲಾ ಆದಾಯವಿದ್ದರೂ ಇದೀಗ ವಿಐಪಿ ದರ್ಶನಕ್ಕೆ 2 ಸಾವಿರ ಮತ್ತು ಸೇವಾ ಶುಲ್ಕಗಳನ್ನೂ ಏರಿಕೆ ಮಡಿ ದೇವಿಯ ಭಕ್ತರಿಂದಲೂ ಸುಲಿಗೆಗೆ ನಿಂತಿರುವುದು ಅಕ್ಷಮ್ಯ ಎಂದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು 5 ಬಿಟ್ಟಿ ಭಾಗ್ಯಗಳನ್ನು ಘೋಷಿಸಿ, ಆ ಯೋಜನೆಗಳಿಗೆ ಹಣ ಪೂರೈಸಲು ಆಗದೆ ಈಗ ಚಾಮುಂಡೇಶ್ವರಿ ದೇವಿಯ ಸೇವೆಗಳ ಶುಲ್ಕಗಳನ್ನು (ಅಭಿಷೇಕದ ಶುಲ್ಕವನ್ನು) ಏಕಾಏಕಿ 300 ರೂ ನಿಂದ 550 ರೂ ಗಳಿಗೆ ಏರಿಸಿರುವುದು ಭಕ್ತಾದಿಗಳಿಗೆ ಅತ್ಯಂತ ನೋವಿನ ಸಂಗತಿಯಾಗಿದೆ. ಭಕ್ತಾದಿಗಳ ಧಾರ್ಮಿಕ ಆಚರಣೆ ಮೇಲೆ ಕಣ್ಣಿಟ್ಟು ಭಕ್ತಾದಿಗಳಿಂದ ಬಿಟ್ಟಿ ಭಾಗ್ಯಗಳಿಗೆ ಹಣವನ್ನು ಹೊಂದಿಸಲು ಹೊರಟಿರುವುದು ಸರ್ಕಾರದ ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಸರ್ಕಾರ ಈ ಕೂಡಲೇ 2 ಸಾವಿರ ರೂ.ವಿಐಪಿ ಟಿಕೆಟ್ ರದ್ದು ಮಾಡಿ, ಏರಿಸಿರುವ ಅಭಿಷೇಕದ ಶುಲ್ಕವನ್ನು 300 ರೂ.ಗೆ ಯಥಾ ಸ್ಥಿತಿಗೆ ತರಬೇಕೆಂದು ಕೃಷ್ಣೇಗೌಡ ಒತ್ತಾಯಿಸಿದರು.
0 ಕಾಮೆಂಟ್‌ಗಳು