ಕಳಂಕಿತ ರೈತ ಮುಖಂಡರೊಂದಿಗೆ ಮುಖ್ಯಮಂತ್ರಿಗಳು ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದಾರೆ : ಇಂಗಲಗುಪ್ಪೆ ಕೃಷ್ಣೇಗೌಡ ಆರೋಪ


 ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳಂಕಿತ ರೈತ ಮುಖಂಡರೊಂದಿಗೆ ಬಜೆಟ್ ಪೂರ್ವಭಾವಿ ನಡೆಸಿದ್ದು, ನಿಜವಾದ ಹೋರಾಟಗಾರರನ್ನು ಕಡೆಗಣಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಹತ್ತಾರು ರೈತ ಸಂಘಟನೆಗಳಿವೆ. ರೈತರಿಗಾಗಿ ಪ್ರಾಣ ನೀಡುವ ಸಾವಿರಾರು ಹೋರಾಟಗಾರರು ಇದ್ದಾರೆ. ಅವರೆಲ್ಲರೂ ಪ್ರಾಮಾಣಿಕವಾಗಿ ರೈತರ ಕಷ್ಟ ಸುಖಗಳಿಗೆ ಸ್ಪಂದಿಸಿ ದಿನನಿತ್ಯ ಚಳವಳಿಯಲ್ಲಿ ನಿರತರಾಗಿದ್ದಾರೆ. ಆದರೇ, ಮುಖ್ಯಮಂತ್ರಿಗಳು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಕಾರ್ಮಿಕರ ಮುಷ್ಕರ ಸಂಬಂಧ ಕಮೀಷನ್ ಕೇಳಿದವರನ್ನು, ರೈತರ ಕೆಲಸ ಮಾಡಲು ರೈತರ ಬಳಿಯೇ ಹಣ ವಸೂಲಿ ಮಾಡುವವರನ್ನು ತಮ್ಮ ಪಕ್ಷಕ್ಕೆ ಬಹುಪರಾಕ್ ಹಾಕುವವರನ್ನು ಬಜೆಟ್ ಪೂರ್ವಭಾವಿ ಸಭೆಗೆ ಕರೆದಿರುವ ಕಾರಣ ನಿಜವಾದ ಹೋರಾಟಗಾರರನ್ನು ಅವಮಾನಿಸಿದಂತೆ ಎಂದು ಕಿಡಿ ಕಾರಿದರು.   

ವಾಸ್ತವದಲ್ಲಿ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸರ್ಕಾರ ನಿಜವಾದ ರೈತರೊಂದಿಗೆ ಚರ್ಚೆಯೇ ನಡೆಸಿಲ್ಲ, ಹೀಗಾಗಿ ಈ ಬಜೆಟ್‌ನಲ್ಲಿ ರೈತರು ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳುವುದು ಭ್ರಮೆ ಎಂದರು. 

ರೈತ ಮುಖಂಡರ ಸೋಗಿನಲ್ಲಿ ಭೂ ಮಾಫಿಯಾದಲ್ಲಿ, ರೋಲ್‌ಕಾಲ್‌ಗಳಲ್ಲಿ, ದಲ್ಲಾಳಿ ಕೆಲಸದಲ್ಲಿ ತೊಡಗಿರುವ ವ್ಯಕ್ತಿಗಳು ಸಿಎಂ ಜತೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಖೇದಕರ. ಅದೇನೇ ಇರಲಿ ಮಾರ್ಚ್ ೭ ರಂದು  ಮುಖ್ಯಮಂತ್ರಿಗಳು ಮಂಡಿಸುವ ದಾಖಲೆಯ ಬಜೆಟ್‌ನಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಕೃಷಿ ಮತ್ತು ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಬೇಕು. ಇಲ್ಲದಿದ್ದಲ್ಲಿ ಮಾರ್ಚ್ ೭ರ ನಂತರ ಸಿಎಂ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.    

ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಮೈಕ್ರೋ ಫೈನಾನ್ಸ್‌ಗಳು ರೈತರು ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವುದು ಮುಂದುವರಿದಿದ್ದು. ಸುಗ್ರೀವಾಜ್ಞೆಗೆ ಕವಡೆ ಕಿಮ್ಮತ್ತಿಲ್ಲದಂತಾಗಿದೆ. ನಿನ್ನೆಯಷ್ಟೇ ಸಾಲಬಾಧೆಗೆ ವೃದ್ಧ ರೈತರೊಬ್ಬರು ಹುಣಸೂರಿನಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಮೈಸೂರು ಜಿಲ್ಲೆಯಲ್ಲಿ ಸಾಲು ಸಾಲು ಆತ್ಮಹತ್ಯೆಗಳು ನಡೆದಿವೆ. ಸರ್ಕಾರ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿ ವಸೂಲಿದಾರರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಸರ್ಕಾರಿ ಸರ್ಕಾರಿ ಶಾಲಾ ಕಾಲೇಜುಗಳನ್ನು ನಿರ್ಲಕ್ಷಿಸಿದ ಕಾರಣ ಅವುಗಳ ಶಿಕ್ಷಣ ಗುಣಮಟ್ಟ ಕಡಿಮೆಯಾಗಿದೆ. ಬಜೆಟ್‌ನಲ್ಲಿ ಸರ್ಕಾರ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಮುಂದಾಗಬೇಕು.

ಸರ್ಕಾರ ಒಂದು ಕಡೆ ರಾಜ್ಯದಲ್ಲಿ ಸಾವಿರಾರು ಸಿಎಲ್-೭ ವೈನ್‌ಸ್ಟೋರ್‌ಗಳಿಗೆ ಲೈಸೆನ್ಸ್ ನೀಡುತ್ತಿದೆ. ಮತ್ತೊಂದು ಕಡೆ ೯ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವುದಾಗಿ ಘೊಷಿಸಿದೆ. ಅಂದರೆ ರಾಜ್ಯದಲ್ಲಿ ಕುಡುಕರು ಹೆಚ್ಚಾಗಬೇಕು. ವಿದ್ಯಾವಂತರು ಕಡಿಮೆ ಆಗಬೇಕೆನ್ನುವುದು ಎನ್ನುವುದು ಈ ಸರ್ಕಾರದ ಸ್ಪಷ್ಟ ಉದ್ದೇಶವಾಗಿದೆ. ಕೂಡಲೇ ಈ ಘೋಷಣೆಯನ್ನು ಹಿಂಪಡೆದು ಸರ್ಕಾರ ಮುಚ್ಚಲು ಉದ್ದೇಶಿಸಿರುವ ವಿಶ್ವವಿದ್ಯಾನಿಲಯಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಅವುಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ಈ ಹಿಂದೆ ಬಿಜೆಪಿ ಸರ್ಕಾರ ತಿದ್ದುಪಡಿ ತಂದಿತ್ತು. ಇದನ್ನು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷ ಬಲವಾಗಿ ಶಾಸನ ಸಭೆಯ ಒಳಗೆ ಮತ್ತು ಹೊರಗೆ ವಿರೋಧ ಮಾಡಿದೆ. ಈ ತಿದ್ದುಪಡಿ ಜಾರಿಗೆ ಬಂದ ನಂತರ ಬಂಡವಾಳ ಶಾಯಿಗಳು ಲಂಗು-ಲಗಾಮಿಲ್ಲದೇ ಭೂಮಿಯನ್ನು ಕಬಳಿಸುತ್ತಿದ್ದಾರೆ. ಬಂಡವಾಳ ಶಾಹಿಗಳು ಫಲವತ್ತಾದ ಸಾವಿರಾರು ಎಕರೆ ಭೂಮಿಯನ್ನು ಕೊಂಡು ಅದೇ ಭೂಮಿಯನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿದ್ದಾರೆ. ಅಲ್ಲದೇ ಕೃಷಿಯೇತರ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಮಸೂದೆಯನ್ನು ವಾಪಸ್ಸು ಪಡೆಯಬೇಕು.

ಕೃಷಿ ಮಾರುಕಟ್ಟೆ ಕಾಯಿದೆಗೆ ತಿದ್ದುಪಡಿ ತಂದು ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಿತ್ತು. ಕಾಂಗ್ರೇಸ್ ಸರ್ಕಾರ ಈ ತಿದ್ದುಪಡಿಗೆ ಹಲವಾರು ಮಾರ್ಪಾಡುಗಳನ್ನು ಮಾಡಿದೆ. ಆದರೆ, ರೈತರ ಹಿತದೃಷ್ಟಿಯಿಂದ ಮತ್ತಷ್ಟು ಸುಧಾರಣೆಗಳನ್ನು ತಂದು ಈ ಕಾಯಿದೆಯನ್ನು ಬಲಪಡಿಸಬೇಕು.

೧೯೧೦ ವಿದ್ಯುತ್ ಕಾಯಿದೆಗೆ ಕೇಂದ್ರ ಸರ್ಕಾರ ೨೦೨೨ರಲ್ಲಿ ತಿದ್ದುಪಡಿ ತಂದು ಸಂಪೂರ್ಣ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಅನುಕೂಲ ಮಾಡಲು ಹೊರಟಿದೆ. ಈ ಕಾಯಿದೆಯು ರೈತರಿಗೆ, ಸಣ್ಣ ಕೈಗಾರಿಕೆಗಳಿಗೆ ಮತ್ತು ಗ್ರಾಹಕರಿಗೆ ತೊಂದರೆ ಉಂಟು ಮಾಡಲಿದ್ದು, ರಾಜ್ಯ ಸರ್ಕಾರ ಈ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲವೆಂದು ಘೋಷಣೆ ಮಾಡಬೇಕು. ಮತ್ತು ಯಾವುದೇ ಕಾರಣಕ್ಕೂ ಕೃಷಿ ಪಂಪ್‌ಸೆಟ್‌ಗಳಿಗೆ

ಸ್ಮಾರ್ಟ್ ಮೀಟರ್ ಅಳವಡಿಸುವುದಿಲ್ಲವೆಂದು ಈ ಅಧಿವೇಶನದಲ್ಲಿ ಸ್ಪಷ್ಟಪಡಿಸಬೇಕು. ಒಟ್ಟಾರೆ, ಕೃಷಿ ಭೂಮಿಯು ಶಾಶ್ವತವಾಗಿ ರೈತ ಕುಟುಂಬದಲ್ಲೇ ಉಳಿಯುವಂತೆ ಸರ್ಕಾರ ನಿಯಮಾವಳಿ ರೂಪಿಸಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕೆಂಪರಾಜು, ಮಲ್ಲೇಶ್ ನಾಯಕ, ಪುಟ್ಟಸ್ವಾಮಿನಾಯಕ ಇದ್ದರು.

                                                      

                            


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು