ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಹಾಗೂ ವರನಟ ಡಾ. ರಾಜ್ ಕುಮಾರ್ ಅವರ ಪ್ರತಿಮೆಗಳಿಗೆ ಸರ್ಕಾರ ಕೂಡಲೇ ಮೇಲ್ಬಾವಣಿ (ಮಂಟಪ) ನಿರ್ಮಾಣ ಮಾಡಬೇಕೆಂದು ಹೋರಾಟ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರನ್ನು ಒತ್ತಾಯಿಸಿದೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎಸ್.ರಾಜೇಶ್ ಮಾತನಾಡಿ, ಮೈಸೂರು ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಬಸವಣ್ಣ, ಪರಮಹಂಸ, ಜಯಚಾಮರಾಜೇಂದ್ರ ಒಡೆಯರ್, ಕೃಷ್ಣರಾಜ ಒಡೆಯರ್ ಇನ್ನಿತರ ನಾಯಕರುಗಳ ಪ್ರತಿಮೆಗಳಿಗೆ ಸುಂದರವಾದ ಮೇಲ್ಬಾವಣಿ ಅತ್ಯಾಕರ್ಷಕವಾದ ಮಂಟಪ ನಿರ್ಮಾಣ ಮಾಡಿರುವುದು ಸಂತೋಷದ ವಿಷಯವಾಗಿರುತ್ತದೆ. ಅದೇ ರೀತಿ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಕನ್ನಡ ಚಲನ ಚಿತ್ರರಂಗಕ್ಕೆ, ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ ಡಾ.ರಾಜ್ ಕುಮಾರ್ ಅವರ ಪುತ್ಥಳಿಗೆ ಭವ್ಯವಾದ ಆಕರ್ಷಣೀಯ ಮೇಲ್ಬಾವಣಿ (ಮಂಟಪ) ಇಲ್ಲದಿರುವುದು ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ, ದಲಿತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಹೋರಾಟ ಮಾಡಿದಂತಹ ಡಾ.ಬಾಬು ಜಗಜೀವನರಾಂ ಅವರ ಪ್ರತಿಮೆಗಳಿಗೆ ಮೇಲ್ಬಾವಣಿ (ಮಂಟಪ) ಇಲ್ಲದಿರುವುದು ವಿಷಾದನೀಯವಾಗಿರುತ್ತದೆ. ಸರ್ಕಾರ ಈ ಕೂಡಲೇ ಈ ಸಾಲಿನ ಬಜೆಟ್‌ನಲ್ಲಿ ಇವರಿಬ್ಬರು ಮಹನೀಯರ ಪುತ್ಥಳಿಗಳಿಗೆ ಆಕರ್ಷಣೀಯವಾದ ಮೇಲ್ಬಾವಣಿ (ಮಂಟಪ) ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಬೇಕಾಗಿ ಎಸ್.ರಾಜೇಶ್ ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರುಗಳಾದ ಕೆ.ಪಿ.ಸಿ.ಸಿ.ಸದಸ್ಯ ಪ್ರವೀಣ್ ಕುಮಾರ್ .ಜಿ.ಎಲ್., ಹರಿಶ್ಚಂದ್ರ, ಬಿ.ಜಿ.ಕೇಶವ, ರಾಮಣ್ಣ, ರವಿ, ಶ್ರೀನಿವಾಸ್ ಇನ್ನಿತರರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು