ಪಾಂಡವಪುರ : ಒಂಟಿ ಮನೆ ದೋಚಲು ವಿಫಲ ಯತ್ನ ನಡೆಸಿರುವ ದರೋಡೆಕೋರರು ಮನೆಯಲ್ಲಿದ್ದ ಯುವಕನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಸಮೀಪದ ಜಯಂತಿನಗರದ ಬಳಿ ನಡೆದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
ಘಟನೆಯಲ್ಲಿ ರಮೇಶ ಎಂಬವರು ಸ್ಥಳದಲ್ಲೆ ಮೃತಪಟ್ಟಿದ್ದು, ಆತನ ಪತ್ನಿ ಯಶೋಧಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ಘಟನೆ ವಿವರ : ಮೈಸೂರು ಕೆಆರ್ ಪೇಟೆ ಮುಖ್ಯ ರಸ್ತೆ ಪಾಂಡವಪುರ ರೈಲ್ವೆ ನಿಲ್ದಾಣ ಮತ್ತು ಎಲೆಕೆರೆ ಹ್ಯಾಂಡ್‍ಪೋಸ್ಟ್ ನಡುವೆ ಜಯಂತಿನಗರ ಗ್ರಾಮದ ಬಳಿಯ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎದುರಿನಲ್ಲಿರುವ ಇಟ್ಟಿಗೆ ಕಾರ್ಖಾನೆ ಬಳಿ ಮೃತ ರಮೇಶ್ ಅವರು ಜಮೀನಿನಲ್ಲಿ ಒಂಟಿ ಮನೆ ಕಟ್ಟಿಕೊಂಡು ವಾಸವಿದ್ದರು.
ಶನಿವಾರ ರಾತ್ರಿ ಸುಮಾರು 7 ಗಂಟೆಗೆ ವ್ಯಕ್ತಿಯೊಬ್ಬ ಏನೋ ನೆಪ ಮಾಡಿಕೊಂಡು ಮನೆಯ ಬಾಗಿಲು ತಟ್ಟಿದ್ದಾನೆ. ಈ ಸಂದರ್ಭದಲ್ಲಿ ಬಾಗಿಲು ತೆರೆದ ರಮೇಶ್ ಮೇಲೆ ಅಪರಿಚಿತ ವ್ಯಕ್ತಿ ಮಾರಕಾಸ್ತ್ರದಿಂದ ಏಕಾಏಕಿ ದಾಳಿ ನಡೆಸಿದ್ದಾನೆ. ದಾಳಿಯಿಂದ ರಮೇಶ್ ಕುಸಿದು ಬಿದ್ದ ತಕ್ಷಣ ಆತನ ಹೆಂಡತಿ ಯಶೋದಾ ಕಿರುಚಿಕೊಂಡಿದ್ದಾರೆ. ತಕ್ಷಣ ಅಪರಿಚಿತ ವ್ಯಕ್ತಿ ಯಶೋದಾ ಅವರ ಮೇಲೂ ಹಲ್ಲೆ ನಡೆಸಿದ್ದು, ಯಶೋಧಾ ಪೆಟ್ಟು ತಿಂದರೂ ಮನೆಯಿಂದ ಆಚೆ ಓಡಿ ಬಂದು ಹೊರಗಿನಿಂದ ಮನೆಯ ಚಿಲಕ ಹಾಕಿಕೊಂಡು ಮತ್ತೇ ಕಿರುಚಾಡಿ ಜನ ಸೇರಿಸಿದ್ದಾರೆ. ಈ ವೇಳೆ ಅಕ್ಕ ಪಕ್ಕದಲ್ಲಿದ್ದ ಜನರು ಸೇರಿ ಮನೆಯ ಬಾಗಿಲು ತೆರೆದು ಒಳಗಿದ್ದ ವ್ಯಕ್ತಿಯನ್ನು ಥಳಿಸಿದ್ದಾರೆ ಎನ್ನಲಾಗಿದೆ.
ನಂತರ ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪೊಲಿಸರು ಧಾವಿಸಿ ಕೊಲೆಯಾದ ರಮೇಶ್ ಅವರ ಶವವನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ, ಗಾಯಗೊಂಡಿದ್ದ ಯಶೋದಾ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳಿಸಿದರು.
ಸಾರ್ವಜನಿಕರ ಥಳಿತದಿಂದ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಸಾರ್ವಜನಿಕರು ವ್ಯಕ್ತಿಯನ್ನು ನಮ್ಮ ವಶಕ್ಕೆ ನೀಡಿ ಎಂದು ಆಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದರು ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಬರುವ ಮುನ್ನ ಒಳನುಗ್ಗಿದ ಸಾರ್ವಜನಿಕರು ಮನೆಯೊಳಗಿನ ದೃಶ್ಯವನ್ನು ತಮ್ಮ ಮೊಬೈಲ್‍ಗಳಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮೇಶ್ ಅವರ ಶವದ ಘೊರ ದೃಶ್ಯಗಳನ್ನು ನೋಡಿದ ಜನರು ಬೆಚ್ಚಿ ಬಿದ್ದಿದ್ದು, ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ಮೂಡಿದೆ.
0 ಕಾಮೆಂಟ್‌ಗಳು