ಮೈಸೂರಿನಲ್ಲಿ ಸಂಭ್ರಮದಿಂದ ಜರುಗಿದ ನೌಕಾಪಡೆ ದಿನ : ನಿವೃತ್ತ ಯೋಧ ಉಜಿರೆಯ 78 ವರ್ಷದ ಎ.ಕೆ.ಶಿವನ್ ದಂಪತಿಗೆ ಸನ್ಮಾನ


 ಮೈಸೂರು : 1965 ಮತ್ತು 1971ರ ಇಂಡೋ ಪಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ನೌಕಾಸೇನೆಯ ನಿವೃತ್ತ ಯೋಧರಾದ ಉಜಿರೆಯ 78 ವರ್ಷದ ಎ.ಕೆ.ಶಿವನ್ ದಂಪತಿಯನ್ನು  ಗೌರವಿಸುವ ಮೂಲಕ ಭಾನುವಾರ ಮೈಸೂರು ವಿಭಾಗದ ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದಿಂದ ನೌಕಾಪಡೆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ರಿಯೋ ಮೆರಿಡಿಯನ್ ಹೋಟೆಲ್‍ನಲ್ಲಿ ಏರ್ಪಡಿಸಿದ್ದ ನೌಕಾಪಡೆ ದಿನವನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸೈನಿಕರೂ ಆದ ಸಿ.ಎನ್.ಮಂಜೇಗೌಡ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ದೇಶದ ನಿಜವಾದ ನಾಯಕರಾದ ಸೈನಿಕರು ರಾಜಕೀಯಕ್ಕೆ ಬರುವ ಅವಶ್ಯಕತೆ ಇದೆ. ನಾನು ನಿವೃತ್ತ ಯೋಧನಾಗಿದ್ದು, ಸೈನಿಕರು ನಿವೃತ್ತರಾದ ನಂತರ ಜೀವನ ಸಾಗಿಸುವುದು ಎಷ್ಟು ಕಷ್ಟ. ಸಮಾಜದಲ್ಲಿ ನಮನ್ನು ಕೇಳುವವರೇ ಇರುವುದಿಲ್ಲ. ಆದ್ದರಿಂದ ಸೈನಿಕರು ರಾಜಕೀಯಕ್ಕೆ ಬರಬೇಕು ಅದರ ಅವಶ್ಯಕತೆ ಇದೆ ಎಂದರು.


ಎಲ್ಲಾ ಹಂತದ ಮಾಜಿ ಸೈನಿಕರಿಗೆ ಜಮೀನು ನೀಡಬೇಕು. ತೆರಿಗೆಯಲ್ಲಿ ರಿಯಾಯಿತಿ ನೀಡಿಬೇಕು. ನಿವೃತ್ತರಾದ ಸೈನಿಕರಿಗೆ ಅವರ ಊರಿನಲ್ಲಿಯೇ ವಿವಿಧ ಇಲಾಖೆಯಲ್ಲಿ ಕೆಲಸ ನೀಡಬೇಕೆಂದು ಈಗಾಗಲೇ ಆಗ್ರಹಿಸಿದ ಹಿನ್ನೆಲೆಯಲ್ಲಿ ಎಲ್ಲವೂ ಸಾಕಾರಗೊಂಡಿದೆ. ಮತ್ತೊಂದೆಡೆ ಪ್ರಧಾನ ಮಂತ್ರಿ ಮೋದಿ ಅವರು ಒನ್ ನೇಷನ್ ಒನ್ ಪೆನ್ಷನ್ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.

ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಗಜಾನನ ಟಿ.ಭಟ್ ಮಾತನಾಡಿ, 

ಪ್ರಸ್ತುತ ಸಾಲಿನಲ್ಲಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮಗಳ ವಿವರಗಳನ್ನು ಸಭೆಯ ಮುಂದಿರಿಸಿದರು.

ಸಂಘದ ವತಿಯಿಂದ ನಿವೃತ್ತ ನೌಕಾಪಡೆ ಸೈನಿಕರಿಗೆ ಪಿಂಚಣಿ ಪಡೆಯಲು ಅಗತ್ಯವಾದ ಲೈಫ್ ಸರ್ಟಿಫಿಕೇಟ್, ರಕ್ತದಾನ ಶಿಬಿರ, ನೌಕಾಪಡೆ ಸಾಪ್ತಾಹ ಮತ್ತಿತರ ವಿವರಗಳನ್ನು ವಾಚನ ಮಾಡಿದರು. ಅಲ್ಲದೇ ಜಿಲ್ಲಾಡಳಿದಿಂದ ತಮಗೆ ದೊರಕಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಂಘದ ಎಲ್ಲ ಸದಸ್ಯರಿಗೂ ಅರ್ಪಿಸಿದ್ದೇನೆ ಎಂದಾಗ ನಿವೃತ್ತ ಸೈನಿಕರು ಸಂತಸದಿಂದ ಚಪ್ಪಾಳೆ ಸಿಡಿಸಿದರು.

ಕೊಡಗು ಜಿಲ್ಲೆಯ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಜಾಲಿ ಸೋಮಣ್ಣ ಮಾತನಾಡಿ,  1971ರಲ್ಲಿ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಟ್ರೈಡೆಂಟ್ ಪ್ರಾರಂಭಿಸಿದ ನೆನಪಿಗಾಗಿ ಹಾಗೂ ವಿವಿಧ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಯೋಧರನ್ನು ಸ್ಮರಿಸುವ ಸಲುವಾಗಿ ಆಚರಿಸುವ ನೌಕಾಪಡೆ ದಿನವನ್ನು ಮೈಸೂರು ವಿಭಾಗದ ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದಿಂದ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಶ್ಲಾಘಿಸಿದರು. 

ಇದೇ ಸಂದರ್ಭದಲ್ಲಿ ಹಾಸನದ ಸುಪ್ರೀಂ ಫರ್ನೀಚರ್ ಮಾಲೀಕರಾದ ಮೋಹನ್ ಕುಮಾರ್ ಅವರು ಮೈಸೂರು ವಿಭಾಗದ ನಿವೃತ್ತ ನೌಪಾಪಡೆ ಸೈನಿಕರ ಸಂಘಕ್ಕೆ 70 ಸ್ಟೋಲ್‍ಗಳನ್ನು ಉಚಿತವಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಅಡ್ಮಿರಲ್ ಗಾಯಕ್‍ವಾಡ್, ಮೈಸೂರು ವಿಭಾಗದ ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದ ಉಪಾಧ್ಯಕ್ಷರಾದ ಕೆ.ವಿ.ಉತ್ತಪ್ಪ, ಅಸಿಸ್ಟೆಂಟ್ ಕಮೀಷನರ್ ನಂದನ್, ಡಿಜಿಸಿಎ ಜಗದೀಶ್ ಮತ್ತಿತರರು ಇದ್ದರು.

ವಿಧಾನ ಪರಿಷತ್ ಪ್ರವೇಶಿಸಿದ ದೇಶದಮೊದಲ ಮಾಜಿ ಸೈನಿಕ

ದೇಶದಲ್ಲಿ ಮೊದಲು ಮಾಜಿ ಸೈನಿಕನಾಗಿ ವಿಧಾನ ಪರಿಷತ್ ಸದಸ್ಯನಾಗಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದೆ. ಈಗ ಲೋಕಸಭೆಯಲ್ಲಿಯೂ ಒಬ್ಬರು ಇದ್ದಾರೆ. ನಾನು ಎಂಎಲ್‍ಸಿ ಆಗಲು ಸೇನೆ ಭದ್ರ ಬುನಾದಿಯಾಗಿದೆ. ಇಂದು ವಿಧಾನ ಸಭೆಯಲ್ಲಿ ವಿಷಯ ಚಿರ್ಚಿಸಲು ಸ್ಪೀಕರ್‍ಗೆ  ಅವಕಾಶ ಕೇಳಿದ ತಕ್ಷಣ ಮಾಜಿ ಸೈನಿಕ ಎಂದು ಹೆಚ್ಚು ಅವಕಾಶ ನೀಡುತ್ತಾರೆ.

ಸಿ.ಎನ್.ಮಂಜೇಗೌಡ, ಎಂ.ಎಲ್.ಸಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು