ಮುಂದುವರಿದ ಮುಡಾ ಅಧ್ಯಕ್ಷ ಮರೀಗೌಡರ ಸಿಟಿ ರೌಂಡ್ಸ್

ಖಾಸಗಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಚಿಂತನೆ 

ಮೈಸೂರು : ಜೂನ್ ೧೮ ರಿಂದ ಅಧಿಕಾರಿಗಳ ಜತೆ ನಗರದಲ್ಲಿರುವ ಮೂಡಾ ಆಸ್ತಿಗಳ ವೀಕ್ಷಣೆ, ಬಡಾವಣೆಗಳ ಅಭಿವೃದ್ಧಿಗಾಗಿ ಮೂಲ ಸೌಕರ್ಯಗಳ ಪರಿಶೀಲನೆ ನಡೆಸುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ಶುಕ್ರವಾರವೂ ತಮ್ಮ ಸಿಟಿರೌಂಡ್ಸ್ ಮುಂದುವರಿಸಿದ್ದು, ಮುಡಾ ಆಯುಕ್ತ ದಿನೇಶ್ ಕುಮಾರ್ ಹಾಗೂ ಅಧಿಕಾರಿಗಳ ಜತೆ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಸುದೀರ್ಘವಾಗಿ ಆಲಿಸಿದರು.

ಆದಿತ್ಯ ಸರ್ಕಲ್ ಸಮೀಪದ ಸೋಮನಾಥ ನಗರಕ್ಕೆ ಭೇಟಿ ನೀಡಿ ಬಡಾವಣೆ ಪಕ್ಕದಲ್ಲಿ ಹಾದುಹೋಗುವ ರಾಜಕಾಲುವೆಯನ್ನು ಪರಿಶೀಲಿಸಿದರು. 
ರಾಜಕಾಲುವೆಗೆ ತಡೆಗೋಡೆಗಳು ಇಲ್ಲದ ಕಾರಣ ಮೋರಿ ನೀರು ಎಲ್ಲೆಂದರಲ್ಲಿ ಹರಿದು ಕೆಲವು ಕಡೆ ನಿಂತಿರುವ ಕಾರಣ ಸ್ಥಳದಲ್ಲಿ ದುರ್ವಾಸನೆ ಇರುವುದನ್ನು ಗಮನಿಸಿ ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಅವರು, ಕೇರ್ಗಳ್ಳಿಗೆ ಭೇಟಿ ನೀಡಿ ಕೆಲವು ಕಡೆ ಸೆಪ್ಟಿಕ್ ಟ್ಯಾಂಕ್ ಇಲ್ಲದ ಕಾರಣ ಯುಜಿಡಿ ನೀರು ರಸ್ತೆಯಲ್ಲಿ ಹರಿದುಹೋಗುತ್ತಿದ್ದನ್ನು ಗಮನಿಸಿದರು. ಆರ್‌ಟಿ ನಗರದ ಪ್ರಭಾಕರ ಬಡಾವಣೆ, ಮಹಾಲಕ್ಷ್ಮಿ ಲೇಔಟ್‌ಗಳಿಗೆ ಭೇಟಿ ನೀಡಿದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು, ರಸ್ತೆ ಸೌಲಭ್ಯ, ಕುಡಿಯುವ ನೀರು, ಚರಂಡಿ ಶುಚಿತ್ವ, ಕಸ ವಿಲೇವಾರಿ, ಬೀದಿ ದೀಪಗಳ ನಿರ್ವಹಣೆ ಮಾಡಿಸಿಕೊಡುವಂತೆ ಮರೀಗೌಡ ಅವರಲ್ಲಿ ಮನವಿ ಮಾಡಿದರು. ಇದರ ಜತೆ ಲಿಂಗಾಬುದಿ ಪಾಳ್ಯ ಸರ್ಕಾರಿ ಶಾಲೆಯ ಪಕ್ಕದಲ್ಲಿ ರಸ್ತೆ ದುಃಸ್ಥಿತಿಯಲ್ಲಿದ್ದು, ಅದನ್ನು ದುರಸ್ತಿ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಸಿದ್ದರಾಮಯ್ಯ, ಬಡಾವಣೆ ಐಶ್ವರ್ಯ ನಗರ, ಎಸ್‌ಬಿಎಂ ಲೇಔಟ್, ಚಾಮುಂಡಿ ಬೆಟ್ಟದ ಬಳಿ ಇರುವ ವಿದ್ಯುತ್ ಚಿತಗಾರ ಪರಿಶೀಲಿಸಿದರು.  

ಕೆಲವು ಬಡಾವಣೆಯಲ್ಲಿ ಪಾರ್ಕುಗಳ ನಿರ್ವಹಣೆ ಇಲ್ಲದೆ ಗಿಡಗಂಟೆಗಳು ಬೆಳೆದುನಿಂತಿದ್ದು, ಹಾವುಗಳು ಸೇರಿಕೊಂಡು ಸಮೀಪದ ಮನೆಗಳಿಗೆ ಹೊಕ್ಕುತ್ತವೆ ಇದರಿಂದ ಭಾರಿ ಅನಾನುಕೂಲವಾಗಿದೆ. ಜತೆಗೆ ಪಾರ್ಕುಗಳಲ್ಲಿರುವ ಸೆಪ್ಟಿಕ್ ಟ್ಯಾಂಕ್‌ಗಳಲ್ಲಿ ಮತ್ತು ಬಾಜುವಿನ ಮೋರಿಗಳಲ್ಲಿ ಶಿಲ್ಟು ತುಂಬಿಕೊಂಡು ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆ ಬಂದರೆ ನೀರು ಮನೆಗಳಿಗೆ ನುಗ್ಗುತ್ತದೆ ಎಂದು ಸಾರ್ವಜನಿಕರು ದೂರಿದರು. ಇದೇ ವೇಳೆ ಆರ್‌ಟಿ ನಗರ ಸಮೀಪ ಸಮುದಾಯಭವನ ಮತ್ತು ದೇವಾಲಯ ಹಾಗೂ ಗ್ರಂಥಾಲಯ ನಿರ್ಮಿಸಿಕೊಡುವಂತೆ ಸಾರ್ವಜನಿಕರು ಮರೀಗೌಡ ಅವರನ್ನು ಸನ್ಮಾನಿಸಿ ಮನವಿ ಸಲ್ಲಿಸಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಮರೀಗೌಡ ಅವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿ ತಕ್ಷಣ ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಹೇಳಿದರು.
ಕೆ.ಆರ್.ಕ್ಷೇತ್ರದ ಶಾಸಕ ಶ್ರೀವತ್ಸ ಅವರ ಸೂಚನೆ 
ಮೇರೆಗೆ ಐಶ್ವರ್ಯ ಬಡಾವಣೆಯಲ್ಲಿ ಒಳಚರಂಡಿ ನೀರು ಮುಂದೆ ಹೋಗಲು ತೊಂದರೆಯಾಗಿದ್ದು, ಭೂ ಮಾಲೀಕರೊಂದಿಗೆ ಮಾತನಾಡಿ ಚೆನ್ನರೆಡ್ಡಿ ಜಮೀನಿನವರೆಗೆ ಒಳಚರಂಡಿ ಮಾಡಲು ಸೂಚಿಸಿದರು. ನಾಯ್ಡು ಸ್ಟೋರ್‌ನಿಂದ ಜೋಡಿ ರಸ್ತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜೆಪಿ ನಗರದ ಗೊಬ್ಬಳಿ ಮರ ಸರ್ಕಲ್‌ನಿಂದ ದಕ್ಷಿಣಕ್ಕೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಖಾಸಗಿ ವ್ಯಕ್ತಿಗೆ ಬದಲಿ ನಿವೇಶನ ನೀಡಿ ಸಮಸ್ಯೆ ಪರಿಹರಿಸಲು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಶೇಖರ, ತಹಸೀಲ್ದಾರ್ ಮೋಹನ್ ಕುಮಾರಿ, ಸಮೀನಾ, ಮೀನಾಕ್ಷಿ, ಸಹಾಯಕ ನಿರ್ದೇಶಕರಾದ ರೂಪ, ಪ್ರಶಾಂತ, ಗಂಗಾಧರ್ ಮುಖಂಡರಾದ ರವಿ, ಪ್ರಕಾಶ್, ಜವರೇಗೌಡ, ಲಕ್ಷ್ಮಯ್ಯ, ದೇವಯ್ಯ, ಬಂಗಾರಪ್ಪ, ಮಹದೇವ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.

ಸ್ಥಳೀಯ ಸಂಸ್ಥೆಗಳಿಗೆ ಖಾಸಗಿ ಬಡಾವಣೆಗಳ ನಿರ್ವಹಣೆ ಜವಾಬ್ದಾರಿ
ಖಾಸಗಿ ಬಡಾವಣೆಗಳನ್ನು ಆಯಾ ವ್ಯಾಪ್ತಿಯ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸಿದ್ದರಾಮಯ್ಯ ಬಡಾವಣೆಗೆ ಮೂಲಸೌಕರ್ಯ ಒದಗಿಸುವುದು. 
ಆರ್.ಟಿ. ನಗರದಲ್ಲಿ ನಿಜವಾದ ಭೂ ಮಾಲೀಕನಿಗೆ ತಲುಪಬೇಕಾದ ಹಣವನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. 
ಎಸ್‌ಬಿಎಂ ಲೇಔಟ್ ೩೬ ಮನೆಗಳಿಗೆ ತಿರುಗಾಡಲು ರಸ್ತೆ ಇಲ್ಲದೆ ತೊಂದರೆಯಾಗಿದೆ ಎಂದು ದೂರು ಬಂದಿದ್ದು  ಅಧಿಕಾರಿಗಳು ಕಾಂಪೌಂಡ್ ಹಾಕಲು ಮುಂದಾಗಿರುವ ವ್ಯಕ್ತಿಗೆ ನೋಟಿಸ್ ನೀಡಿ ಸಾರ್ವಜನಿಕರಿಗೆ ರಸ್ತೆ ನಿರ್ಮಾಣ ಮಾಡಿಕೊಡಲು ಸೂಚಿಸಲಾಗಿದೆ.
ಕೆ.ಮರೀಗೌಡ, ಮೂಡಾ ಅಧ್ಯಕ್ಷ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು