ಮೇಕೆದಾಟು ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಕಾವೇರಿ ಕ್ರಿಯಾಸಮಿತಿ ಅಧ್ಯಕ್ಷ ಜಯಪ್ರಕಾಶ್ (ಜೆಪಿ) ಆರೋಪ
ಜೂನ್ 22, 2024
ಮೈಸೂರು : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ (ಜೆಪಿ) ಆರೋಪಿಸಿದರು. ಶನಿವಾರ ನಗರದ ಟೌನ್‌ಹಾಲ್ ಎದುರು ಕಾವೇರಿ ಕ್ರಿಯಾ ಸಮಿತಿಯಿಂದ ಕಾವೇರಿ ನೀರಿನ ರಕ್ಷಣೆ ಮತ್ತು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಏರ್ಪಡಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಕಾವೇರಿ ನೀರಿನ ರಕ್ಷಣೆ ಸೇರಿದಂತೆ ರೈತರ ಯಾವುದೇ ಸಮಸ್ಯೆಗಳನ್ನು ಬಗೆಹರಿಸದೆ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ರಾಜ್ಯ ಸರ್ಕಾರ ಯಾವುದೇ ಪ್ರಯತ್ನ ಪಡುತ್ತಿಲ್ಲ. ಕೇಂದ್ರ ಸರ್ಕಾರ ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಅನುಮತಿ ನೀಡಲು ಸಿದ್ಧವಿದ್ದರೂ, ರಾಜ್ಯ ಸರ್ಕಾರ ಮಾತ್ರ ಅನುಮತಿ ಪಡೆಯಲು ಮುಂದಾಗಿಲ್ಲ ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎಂದು ಟೀಕಿಸಿದರು. ಕಾವೇರಿ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಹಾಗೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾವೇರಿ ಕ್ರಿಯಾ ಸಮಿತಿಯು ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು. ಕರ್ನಾಟದಿಂದ ನೂತನವಾಗಿ ಆಯ್ಕೆಯಾಗಿರುವ ಸಂಸದರು ಪಕ್ಷಭೇದ ಮರೆತು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಕಾವೇರಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡಬೇಕು. ಈ ಬಾರಿ ಕೆಆರ್‌ಎಸ್ ಜಲಾಶಯ ತುಂಬಿದ ನಂತರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದೆ ನಮ್ಮ ರಾಜ್ಯದ ರೈತರ ಹಿತಾಸಕ್ತಿ ಕಾಪಾಡಬೇಕು. ಯಾವುದೋ ಕಾಲದಲ್ಲಿ ಆದ ಕಾವೇರಿ ನೀರಿನ ಒಪ್ಪಂದವನ್ನು ಕೂಡಲೇ ಮರುಪರಿಶೀಲಿಸಬೇಕೆಂದು ಜಯಪ್ರಕಾಶ್ ಕೋರಿದರು.
ಪ್ರತಿಭಟನೆಯಲ್ಲಿ ಕಾವೇರಿ ಕ್ರಿಯಾ ಸಮಿತಿಯ ಮೂಗೂರು ನಂಜುಂಡಸ್ವಾಮಿ, ತೇಜಸ್ ಲೋಕೇಶ್ ಗೌಡ, ಅಶೋಕ್ (ಸುಬ್ಬಣ್ಣ) ಸಿಂಧುವಳ್ಳಿ ಶಿವಕುಮಾರ್, ರವೀಶ್, ರಾಜಶೇಖರ್, ಬಿ.ಬಿ. ಹನುಮಂತಪ್ಪ, ಪ್ರಭಾಕರ್, ಪದ್ಮನಿ, ವಾಣಿ, ಬಾಲಕೃಷ್ಣ, ಡಾ.ರಾಜ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪುರುಷೋತ್ತಮ, ಆಟೋ ಮಹದೇವ್, ಕೃಷ್ಣಯ್ಯ, ಚಂದ್ರಶೇಖರ್, ಪ್ರಭುಬಸಪ್ಪ, ರಾಜಣ್ಣ, ಲಕ್ಷ್ಮೀ, ರಾಮಚಂದ್ರ, ಭಾಗ್ಯಮ್ಮ, ಮಂಜುಳ, ಹನುಮಂತೇಗೌಡ, ನಾಗರಾಜೇಗೌಡ, ಮಹೇಶ್‌ಗೌಡ, ನೇಹಾ, ಆಶೋಕ್, ಮಂಜುಳ, ವಿಷ್ಣು ಕುಮಾರಸ್ವಾಮಿ, ಸಂಜಯ್, ವರಕೂಡು ಕೃಷ್ಣಗೌಡ ಸೇರಿದಂತೆ ಅನೇಕ ಹೋರಾಟಗಾರರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು