ಮೈಸೂರಿನ ಪ್ರಖ್ಯಾತ ವ್ಯಸನಮುಕ್ತರ ಕೇಂದ್ರ ಬಸವಮಾರ್ಗ ಸಂಸ್ಥೆಗೆ ಮಾಜಿ ಸಿಎಂ ಹೆಚ್‌ಡಿಕೆ ಭೇಟಿ

ಎಸ್.ಬಸವರಾಜು ಕಾರ್ಯಕ್ಕೆ ಕುಮಾರಸ್ವಾಮಿ ಮೆಚ್ಚುಗೆ

ವರದಿ : ನಜೀರ್ ಅಹಮದ್
ಮೈಸೂರು: ನಗರದ ಪ್ರತಿಷ್ಠಿತ ವ್ಯಸನಮುಕ್ತ ಕೇಂದ್ರವಾದ ಬಸವಮಾರ್ಗಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಭೇಟಿ ನೀಡಿದ್ದರು. 
ಈ ವೇಳೆ ಮಾತನಾಡಿದ ಅವರು, ಸಂಸ್ಥೆಯ ಮುಖ್ಯಸ್ಥರಾದ ಎಸ್.ಬಸವರಾಜು ಅವರ ನೇತೃತ್ವದಲ್ಲಿ ಬಸವಮಾರ್ಗ ಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಾ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿರುವುದು ಶ್ರೇಷ್ಠ ಕಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಸಮೂಹವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಬಸವಮಾರ್ಗ ಸಂಸ್ಥೆ ೩೮ಕ್ಕೂ ಹೆಚ್ಚಿನ ಉಚಿತ ಕ್ಯಾಂಪ್ ಮಾಡಿದೆ. ಎಲ್ಲರೂ ನಮ್ಮವರೇ ಎನ್ನುವ ಆಶಯ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ದಾರಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರುವ ಕೆಲಸಕ್ಕೆ ಶುಭವಾಗಲಿ, ರಾಜ್ಯದ ಎಲ್ಲ ಕುಟುಂಬಗಳು ಸುಖ, ಶಾಂತಿಯಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬಸವಮಾರ್ಗ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ಶಾಸಕರಾದ ಸಿ.ಎನ್. ಮಂಜೇಗೌಡ, ಜೆಡಿಎಸ್ ನಾಯಕರಾದ ರವಿ ಕುಮಾರ್, ಪ್ರೇಮ ಶಂಕರೇಗೌಡ, ಬಸವಮಾರ್ಗ ಸಂಸ್ಥಾಪಕರಾದ ಎಸ್.ಬಸವರಾಜು, ಇಂಡಿಯನ್ ಟಿವಿ ಎಂಡಿ ಎಸ್.ವೆಂಕಟೇಶ್ ಕುಮಾರ್, ಸಿಇಒ ಎಸ್.ರಾಜು ಸೇರಿದಂತೆ ನೂರಾರು ಜನ ಎಚ್‌ಡಿಕೆ ಅಭಿಮಾನಿಗಳು ಭಾಗಿಯಾಗಿದ್ದರು. ಈ ವೇಳೆ ಸಂಸ್ಥೆಯಿಂದ ಮಾಜಿ ಮುಖ್ಯಮಂತ್ರಿಗಳನ್ನು ಅಭಿನಂದಿಸಲಾಯಿತು.

ಪ್ರಚಾರಕ್ಕೆ ಸಮಲತಾ ಬರ್ತಾರೆ 

ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸಂಸದೆ ಸುಮಲತಾ ಸಮಯ ನೋಡಿ ಬರುತ್ತಾರೆ. ಎನ್‌ಡಿಎ ಹಾಗೂ ಬಿಜೆಪಿಯನ್ನು ಸುಮಲತಾ ಬೆಂಬಲಿಸಿರುವುದು ಆ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತೆಯೇ ಆಗಲಿದೆ. ನಾವು ಅವರೊಟ್ಟಿಗೆ ಇರುವುದರಿಂದ ನಮಗೂ ಶಕ್ತಿ ಬಂದಂತೆ ಆಗಿದೆ. ಹಿಂದೆ ಎನೂ ಆಗಿತ್ತು. ಆ ತಪ್ಪುಗಳನ್ನು ನೋಡಿ ದೇವೇಗೌಡರು ಆ ಸನ್ನಿವೇಶದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಈಗ ದೇಶದಲ್ಲಿ ಅನೇಕ ಬದಲಾವಣೆಗಳು ಆಗಿವೆ. ದೇಶದ ಈಗಿನ ವ್ಯವಸ್ಥೆಯಲ್ಲಿ ಮೋದಿ ನಾಯಕತ್ವ ಅನಿವಾರ್ಯ ಎಂಬ ದೇಶದ ಜನರ ಭಾವನೆಗೆ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಟೀಕೆಗೆ ಉತ್ತರಿಸಿದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು