ಕುವೆಂಪುನಗರದ ಸುತ್ತಮುತ್ತ ಮನೆ ಮನೆಗಳಿಗೆ ತೆರಳಿ ಹಿಂದೂ ಧರ್ಮದ ಹೆಸರಿನಲ್ಲಿ ಅವರು ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ಸಾಂಸ್ಕೃತಿಕ ಹಿನ್ನೆಲೆ ಇರುವ ವಿಶೇಷ ಕ್ಷೇತ್ರವಾಗಿದೆ. ಇಲ್ಲಿ ಸಾರ್ವಜನಿಕರ ಸೇವೆ ಮಾಡಲು ಒಬ್ಬ ಸೇವಕನ ಅಗತ್ಯವಿದೆ. ದೊಡ್ಡ ದೊಡ್ಡ ಪಕ್ಷಗಳ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಲಿಸಿದ ಬಳಿಕ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ ಮತದಾರರು ಈ ಬಾರಿ ನನ್ನನ್ನು ಗೆಲ್ಲಿಸುವರೆಂಬ ವಿಶ್ವಾಸ ತಮಗಿದೆ ಎಂದರು.
ಅಖಿಲ ಭಾರತ ಹಿಂದೂ ಮಹಾಸಭಾ ಮೈಸೂರು ಜಿಲ್ಲಾ ಅಧ್ಯಕ್ಷರೂ ಆಗಿರುವ ಸಾಯಿ ಸತೀಶ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಕೆಆರ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ‘ನನಗೆ ಚುನಾವಣೆ ಬಗ್ಗೆ ಸಾಕಷ್ಟು ಅನುಭವವಿದೆ. ನಾನು ನಿರಂತರವಾಗಿ ಜನರ ಮದ್ಯೆ ಇರುವ ವ್ಯಕ್ತಿ. ಜನರ ಕಷ್ಟಗಳಿಗೆ ಸದಾಕಾಲ ಸ್ಪಂದಿಸುತ್ತಿದ್ದೇನೆ. ಜತೆಗೆ ಹಿಂದೂ ಧರ್ಮದ ಬಗ್ಗೆ ನನಗಿರುವ ಅಪಾರ ಕಾಳಜಿಯೂ ನನ್ನ ಗೆಲುವಿಗೆ ವರದಾನವಾಗಲಿದೆ’ ಎಂದರು.
ಹಿಂದೂ ಧರ್ಮವನ್ನು ಪ್ರತಿಪಾದಿಸುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯದುವೀರ್ ಕೂಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನೀವೂ ಕೂಡ ಹಿಂದೂ ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದೀರಿ. ಮತದಾರರು ಯಾರಿಗೆ ಓಟು ಹಾಕಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸಾಯಿ ಸತೀಶ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜವಂಶಸ್ಥರು ಜನಸೇವೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೇ, ಈ ಕ್ಷೇತ್ರಕ್ಕೆ ಮತದಾರರ ಮನೆ ಕಾಯುವ, ಅವರ ಕಷ್ಟಗಳಿಗೆ ನೆರವಾಗುವ, ಜನರ ಕೈಗೆ ಸುಲಭವಾಗಿ ಸಿಗುವ ಒಬ್ಬ ಸೇವಕನ ಅಗತ್ಯವಿದೆ. ಈ ಎಲ್ಲ ಗುಣಗಳು ನನ್ನಲ್ಲಿವೆ ಹಾಗಾಗಿ ನನಗೆ ಮತ ನೀಡಬೇಕೆಂದು ಮತದಾರರಲ್ಲಿ ಕೋರುತ್ತೇನೆ ಎಂದು ಹೇಳಿದರು.
ಹಿಂದುತ್ವವನ್ನು ಕಾಪಾಡುವುದೇ ನನ್ನ ಚುನಾವಣಾ ಪ್ರಣಾಳಿಕೆ. ಆದಾಗ್ಯೂ ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದು, ನಿರುದ್ಯೋಗ ಸಮಸ್ಯೆ ನಿವಾರಣೆ, ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸವುದಕ್ಕೆ ನಾನು ಆದ್ಯತೆ ನೀಡುತ್ತೇನೆ ಎಂದು ಸಾಯಿ ಸತೀಶ್ ಹೇಳಿದರು.
ಮೈಸೂರು-ಕೊಡಗು ಪ್ರಬುದ್ಧ ಮತದಾರರು ಇರುವ ಲೋಕಸಭಾ ಕ್ಷೇತ್ರವಾಗಿದೆ. ಇಲ್ಲಿನ ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗುವುದಿಲ್ಲ. ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ. ಹಾಗಾಗಿ ಇಲ್ಲಿ ಯಾವುದೇ ಪ್ರಭಾವ ನಡೆಯುವುದಿಲ್ಲ. ನಾನು ಗೆಲ್ಲುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.