ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ʼಗೆ ಮುಸ್ಲಿಂ ಮುಖಂಡರ ಬೆಂಬಲ

ಮೈಸೂರು : ಮೈಸೂರು ಪ್ರಾಂತ್ಯಕ್ಕೆ ಯದುವಂಶಸ್ಥರ ಕೊಡುಗೆ ಅಪಾರವಾಗಿದ್ದು, ಇಲ್ಲಿನ ಮುಸ್ಲಿಂ ಸಮುದಾಯ ಕೂಡ ಅದರ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಮಹಾರಾಜರ ಕುಡಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಮುಖಂಡರಾದ ಇಲಿಯಾಸ್‌ ಅಹಮದ್‌ ಹೇಳಿದರು.

ಮಂಗಳವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯಲ್ಲಿ ಸರ್‌ ಮಿರ್ಜಾ ಇಸ್ಮಾಯೀಲ್‌ ಅವರನ್ನು ದಿವಾನರನ್ನಾಗಿ ಮಾಡಿಕೊಂಡಿದ್ದು ಅಂದಿನ ಕಾಲದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಂದ ದೊಡ್ಡ ಗೌರವವಾಗಿದೆ.

ಮೈಸೂರಿನ ರಾಜರು ನಗರದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಮುಸ್ಲಿಂ ಸಮುದಾಯದ ಜೊತೆ ರಾಜಮನೆತನದ ಸಂಬಂಧ ಇಂದಿಗೂ ಅತ್ಯಂತ ಸೌಹಾರ್ಧವಾಗಿದೆ. ದಸರಾ ಸಂದರ್ಭ ಸೇರಿದಂತೆ ಅರಮನೆಯ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಮುಸ್ಲಿಂ ಸಮುದಾಯದ ಕುಶಲ ಕರ್ಮಿಗಳು, ತಂತ್ರಜ್ಞರು, ಕಾರ್ಮಿಕರು ಇಂದಿಗೂ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ನಾವು ಅವರನ್ನು ಬೆಂಬಲಿಸಿ ಸಂಸತ್ತಿಗೆ ಆಯ್ಕೆ ಮಾಡುವುದು ಒಡೆಯರ್‌ ಕುಟುಂಬಕ್ಕೆ ಸಲ್ಲಿಸುವ ಅರ್ಥಪೂರ್ಣ  ಗೌರವ ಮತ್ತು ಕೊಡುಗೆ ಎಂದರು.
ನಾವು ಮುಸ್ಲಿಂ ಮೊಹಲ್ಲಾಗಳಿಗೆ ತೆರಳಿ ಯದುವೀರ್‌ ಅವರ ಪರವಾಗಿ ಪ್ರಚಾರ ನಡೆಸುತ್ತೇವೆ. ಕಳೆದ ಚುನಾವಣೆಯಲ್ಲಿ ಶೇ.೨ ರಷ್ಟು ಮುಸ್ಲಿಂ ಮತಗಳು ಬಿಜೆಪಿಗೆ ಬಂದಿದ್ದವು. ಈ ಬಾರಿ ಈ ಸಂಖ್ಯೆ ಹೆಚ್ಚಳವಾಗುತ್ತದೆ.
ರಾಜಕೀಯಕ್ಕೆ ಬರುವ ವ್ಯಕ್ತಿಗಳು ಪ್ರತಿಷ್ಠೆಗೆ ಅಥವಾ ಹಣ ಮಾಡಲು ಬರುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿರುವ ಇಂದಿನ ಕಾಲದಲ್ಲಿ ಯದುವೀರ್‌ ಅವರು ರಾಜವಂಶಸ್ಥರು, ಇವರಿಗೆ ಹಣ ಮಾಡುವುದು, ಅಧಿಕಾರ ಹಿಡಿಯುವುದು ಎಂಬ ಯಾವುದೇ ಆಸೆ ಆಕಾಂಕ್ಷೆ ಇಲ್ಲ. ಕೇವಲ ಜನಸೇವೆಗಾಗಿ ರಾಜಕೀಯಕ್ಕೆ ಬರುತ್ತಿದ್ದಾರೆ. ರಾಜವಂಶಸ್ಥರು ಚುನಾವಣೆಯಲ್ಲಿ ಗೆದ್ದರೆ ಅರಮನೆ ಬಿಟ್ಟು ಹೊರಗೆ ಬರುವುದಿಲ್ಲ. ಜನರ ಕೈಗೆ ಸಿಗುವುದಿಲ್ಲ ಎಂದು ಅವರ ಬಗ್ಗೆ ಕಾಂಗ್ರೆಸ್‌ ಪಕ್ಷದವರು ಸಾಕಷ್ಟು ಅಪಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲಾ ಸುಳ್ಳು. ಅವರು ಚುನಾವಣೆಯಲ್ಲಿ ಗೆದ್ದರೆ ನಮ್ಮ ಸಂಸದರಾಗಿರುತ್ತಾರೆ. ಜನರ ಕೈಗೆ ಸುಲಭವಾಗಿ ಸಿಗಲು ಕಚೇರಿ ಮಾಡಿದ್ದಾರೆ. ನಮ್ಮ ಕುಂದು ಕೊರತೆಗಳನ್ನು ಅವರಲ್ಲಿ ಹೇಳಿಕೊಳ್ಳಬಹುದು ಎಂದು ಹೇಳಿದರು.
ಯದುವೀರ್‌ ಅವರು ಇನ್ನೂ ಯುವಕರು. ಈ ನಾಡಿನ ಅಭಿವೃದ್ಧಿಯ ಹರಿಕಾರರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ವಂಶಸ್ಥರು. ಅವರಿಗೆ ಈ ನಾಡನ್ನು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಬೇರೇನೂ ಗುರಿ ಇಲ್ಲ. ಅವರನ್ನು ಗೆಲ್ಲಿಸಿದರೆ ಒಬ್ಬ ಸಮರ್ಥ, ವಿದ್ಯಾವಂತ ನಾಯಕನನ್ನು ನಾವು ಸಂಸತ್ತಿಗೆ ಕಳಿಸಿದ ಕೀರ್ತಿ ನಮ್ಮ ಮೈಸೂರು-ಕೊಡಗು ಮತದಾರರಿಗೆ ಸಿಗುತ್ತದೆ ಎಂದು ಇಲಿಯಾಸ್‌ ಅಹಮದ್‌ ಹೇಳಿದರು.
ಬಿಜೆಪಿಯ ತ್ರಿಬಲ್‌ ತಲಾಖ್‌ ನಿಷೇದ ನಮ್ಮ ರಾಷ್ಟ್ರದಲ್ಲಿ ಮಾತ್ರವಲ್ಲಿ ಹಲವು ರಾಷ್ಟ್ರಗಳಲ್ಲಿ ಈ ಕಾನೂನು ಜಾರಿಯಲ್ಲಿದೆ. ಹಿಜಾಬ್‌, ಹಲಾಲ್‌ ಮುಂತಾದ ಕೆಲವು ಅಹಿತಕರ ಘಟನೆಗಳು ಆಯಾ ಪ್ರಾಂತ್ಯದ ಸ್ಥಳೀಯ ರಾಜಕೀಯ ಸಮಸ್ಯೆಗಳು. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಅಲ್ಲದೇ ಮುಸ್ಲಿಂ ಮತಗಳು ಬೇಡ ಎಂದು ಪ್ರಧಾನಿಯಾಗಲಿ ನಮ್ಮ ಪಕ್ಷವಾಗಲಿ ಹೇಳಿಲ್ಲ. ಅದು ಕೆಲವು ಮುಖಂಡರ ಮಾತುಗಳಾಗಿವೆ. ಅದಕ್ಕೆ ಪಕ್ಷದಲ್ಲಿ ಯಾವುದೇ ಮನ್ನಣೆ ಇಲ್ಲ. ನಮ್ಮದು ಸಬ್‌ಕಾ ಸಾತ್‌, ಸಬ್‌ಕಾ ವಿಕಾಸ್‌ ಮತ್ತು ಸಬ್‌ಕಾ ವಿಶ್ವಾಸ್‌ ಎಂಬುದು ಪಕ್ಷದ ನಿಲುವು. ಕೇವಲ  
ಮುಸ್ಲಿಂ ಮತಗಳನ್ನು ಪಡೆಯುವ ಕಾರಣದಿಂದ ಕಾಂಗ್ರೆಸ್‌ ಪಕ್ಷವು ಬಿಜೆಪಿ ಮುಸ್ಲಿಂ ವಿರೋಧಿ ಎಂದು ಹೇಳುತ್ತಿದೆ. ಆದರೇ, ಬಿಜೆಪಿಯ ಧೋರಣೆ ಈ ರೀತಿ ಇಲ್ಲ ಎಂದು ಇಲಿಯಾಸ್‌ ಅಹಮದ್‌ ಸಮರ್ಥಿಸಿಕೊಂಡರು.
 
ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡರಾದ ಹನೀಫ್‌, ಝಿಯಾವುಲ್ಲಾ, ಇರ್ಫಾನ್‌ ಅಹಮದ್‌, ಆಫ್ತಾಬ್‌ ಅಹಮದ್‌, ನೂರ್‌ ಅಹಮದ್‌, ರಿಯಾಜ್‌, ಜಿಯಾವುಲ್ಲಾ ಖಾನ್‌ ಮುಂತಾದವರು ಇದ್ದರು.


ಯದುವೀರ್‌ ಗೆದ್ದರೆ ಮೈಸೂರು ಅಭಿವೃದ್ಧಿ
 
ಮೈಸೂರು ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚು ಮೆಚ್ಚಿನ ಅಭ್ಯರ್ಥಿ ಆಗಿರುವ ಕಾರಣ ಅವರು ಚುನಾವಣೆಯಲ್ಲಿ ಜಯಗಳಿಸಿದರೆ ಮೈಸೂರಿನ ಅಭಿವೃದ್ಧಿಯ ಬಾಗಿಲು ತೆರೆದಂತೆ.
 
ಇಲಿಯಾಸ್‌ ಅಹಮದ್‌, ಬಿಜೆಪಿ ರಾಷ್ಟ್ರೀಯ ಮುಖಂಡರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು