ಜಾತಿ, ಧರ್ಮ, ಹಣ, ತೋಳ್ಬಲಗಳ ನಡುವೆಯೂ ಮೌಲ್ಯಾಧಾರಿತ ರಾಜಕಾರಣವೇ ಇಂದಿನ ಅಗತ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಲೋಕಶಕ್ತಿ ಬಸವರಾಜು ಅಭಿಪ್ರಾಯ

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ 
ನೀಡದಿರುವುದು ಬೇಸರ ತಂದಿದೆ 

ಮಂಡ್ಯ : ಪ್ತಸ್ತುತ ದೇಶದ ರಾಜಕಾರಣ ಜಾತಿ, ಧರ್ಮ, ಕೋಮುವಾದ, ಹಣ, ತೋಳ್ಬಲದಲ್ಲಿ ನಡೆಯುತ್ತಿದ್ದು, ಮೌಲ್ಯಾಧಾರಿತ ರಾಜಕಾರಣ ಇಂದಿನ ಅಗತ್ಯವಾಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಲೋಕಶಕ್ತಿ ಪಕ್ಷದ ಅಭ್ಯರ್ಥಿ ಎನ್.ಬಸವರಾಜು ಪ್ರತಿಪಾದಿಸಿದರು. 
ಬುಧವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ಪ್ರಸ್ತುತ ಮಂಡ್ಯ ಲೋಕಸಭಾ ಚುನಾವಣೆಯೂ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಜಾತಿ, ತೋಳ್ಬಲ, ಹಣ ಇದ್ದವರು ಮೇಲುಗೈ ಸಾಧಿಸುತ್ತಾರೆ ಎಂಬ ಮಾತಿನ ನಡುವೆಯೂ ರಾಮಕೃಷ್ಣ ಹೆಗ್ಗಡೆ ಅವರ ಮೌಲ್ಯಾಧಾರಿತ ರಾಜಕಾರಣವನ್ನು ಮತ್ತೊಮ್ಮೆ ಮಂಡ್ಯ ಜಿಲ್ಲೆಯಲ್ಲಿ ಬಿತ್ತುವುದು ಇಂದಿನ ಅಗತ್ಯವಾಗಿರುವ ಕಾರಣ ಅವರು ಕಟ್ಟಿ ಬೆಳಸಿದ ಲೋಕಶಕ್ತಿ ಪಾರ್ಟಿಯಿಂದ ನಾನು ಸ್ಪರ್ಧಿಸುತ್ತಿದ್ದೇನೆ ಎಂದರು.
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡದಿರುವುದು ಬೇಸರ ತಂದಿದೆ ಎಂದು ಹೇಳಿದ ಅವರು, ಅನ್ನ, ಅಕ್ಷರ, ಆಸರೆ ನೀಡಿ ಲಕ್ಷಾಂತರ ಬಡ ಮಕ್ಕಳ ಬಾಳಿಗೆ ಬೆಳಕು ನೀಡಿದ ಶ್ರೀಗಳ ಆದರ್ಶಗಳು ಇಂದಿನ ರಾಜಕಾರಣಿಗಳು ಮತ್ತು ಮಠಾದೀಶರಿಗೆ ಮಾದರಿಯಾಗಿವೆ. ಸೇವೆಯ ಬಗ್ಗೆ ಶ್ರೀಗಳು ನುಡಿಯಲಿಲ್ಲ, ನಡೆದು ತೋರಿದರು. ಅವರ ಬದುಕೇ ಒಂದು ಆದರ್ಶ ಪಾಠವಾಗಿದೆ.
ಶ್ರೀಗಳ ಭಾವಚಿತ್ರದ ಪಾದದ ಬಳಿ ನಾಮಪತ್ರ ಇಟ್ಟು ಅವರ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ್ದೇನೆ. 
ನನಗೆ ಸಿದ್ದಗಂಗಾ ಶ್ರೀಗಳೇ ಆದರ್ಶ, ರಾಮಕೃಷ್ಣ ಹೆಗ್ಗಡೆ, ಅಬ್ದುಲ್ ನಜೀರ್ ಸಾಬ್ ಹಾದಿಯಲ್ಲಿ ರಾಜಕಾರಣ ಮಾಡುವುದು ಇಂದಿನ ಅಗತ್ಯವಾಗಿದೆ ಈ ಕಾರಣಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.     
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು