ಲೋಕಸಭಾ ಚುನಾವಣೆ ಹೊಸ್ತಿಲ್ಲಲ್ಲೆ ವರುಣಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತ

ಪ್ರಬಲ ವೀರಶೈವ ಲಿಂಗಾಯತ ಮುಖಂಡ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ ನಾಳೆ ಬಿಜೆಪಿ ಸೇರ್ಪಡೆ 


 ಮೈಸೂರ್ ಮೇಲ್.ಕಾಂ ವರದಿ : ನಜೀರ್ ಅಹಮದ್

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕ್ಷೇತ್ರವಾಗಿರುವ ವರುಣಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆ ಉಂಟಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ ಕಾಂಗ್ರೆಸ್ ತ್ಯಜಿಸಿ ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

೪೦ ವರ್ಷದಿಂದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದರೂ ತಮ್ಮನ್ನು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡದೆ ನಿರ್ಲಕ್ಷ್ಯ ಮಾಡಿದ ಕಾರಣ ಬೇಸರದಿಂದ ಪಕ್ಷ ತ್ಯಜಿಸುತ್ತಿರುವಾಗಿ ಅವರು ಹೇಳಿದರು.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ನಾನು ಹಗಲಿರುಳು ದುಡಿದಿದ್ದೆ ಆದರೇ, ನನಗೆ ಲೋಕಸಭಾ ಟಿಕೆಟ್ ನೀಡಲಿಲ್ಲ. ಪರವಾಗಿಲ್ಲ. ನಿಗಮ ಮಂಡಳಿಯಲ್ಲೂ ನನಗೆ ಅವಕಾಶ ನೀಡಲಿಲ್ಲ. ಕೆಪಿಸಿಸಿ ಮುಖಂಡರು ಸಹ ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ಕಾರಣದಿಂದಲೂ ನಾನು ಪಕ್ಷ ತ್ಯಜಿಸಲು ನಿರ್ಧಾರ ಮಾಡಿದ್ದೇನೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ೩೦ ಸಾವಿರಕ್ಕೂ ಅಧಿಕ ಮತಗಳಿಂದ ಸೋತರು. ಆದರೇ, ನಾವು ವರುಣಾದಲ್ಲಿ ೩೦ ಸಾವಿರಕ್ಕೂ ಅಧಿಕ ಮತಗಳ ಲೀಡ್ ಕೊಟ್ಟು ಗೆಲ್ಲಿಸಿದೆವು. ಆದರೇ, ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರಿಗೆ ನಿಗಮ, ಮಂಡಳಿ ಛೇರ್ಮನ್ ಮಾಡಿದ್ದಾರೆ. ಗೆಲ್ಲಿಸಿದ ನಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಗುರುಪಾದಸ್ವಾಮಿ ಪರೋಕ್ಷವಾಗಿ ತಮ್ಮನ್ನು ಮೂಡಾ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ನಮ್ಮಪ್ಪನ ತಿಥಿಯೂ ಅಷ್ಟು ಗ್ರ್ಯಾಂಡಾಗಿ ಮಾಡಲಿಲ್ಲ : ಸಿದ್ದರಾಮಯ್ಯನ ಹುಟ್ಟು ಹಬ್ಬ ಅಷ್ಟು ಜೋರಾಗಿ ಮಾಡಿದೆ

ನಮ್ಮಪ್ಪ ಸತ್ತಾಗ ಅವರ ತಿಥಿಯನ್ನೂ ನಾನು ಅಷ್ಟೋಂದು ಗ್ರ್ಯಾಂಡಾಗಿ ಮಾಡಲಿಲ್ಲ. ಆದರೇ, ನಮ್ಮ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಗ್ರ್ಯಾಂಡಾಗಿ ಮಾಡಿದೆ. ೩ಸಾವಿರ ಜನಕ್ಕೆ ಬಾಳೆ ಎಲೆ ಊಟ ಹಾಕಿಸಿದೆ. ಏನು ಪ್ರಯೋಜನ. ನಿರಂತರವಾಗಿ ನನ್ನನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದರು. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ನಾನು ಆಕಾಂಕ್ಷಿಯಾಗಿದ್ದೆ. ಟಿಕೆಟ್ ಕೊಡಲಿಲ್ಲ. ಆದರೇ, ಚುನಾವಣೆ ಸಂಬಂಧ ಯಾವುದೇ ಜವಬ್ದಾರಿಯನ್ನೂ ನನಗೆ ನೀಡಲಿಲ್ಲ. ಸುಮ್ಮನಿದ್ದು ಏನು ಮಾಡಲಿ ಎಂದು ಗುರುಪಾದಸ್ವಾಮಿ ಪ್ರಶ್ನಿಸಿದರು. 

ಬಿಜೆಪಿ ಸೇರ್ಪಡೆಗೆ ಬಾಲರಾಜು ಸ್ನೇಹ ಕಾರಣ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜು ಒಬ್ಬ ಪ್ರಾಮಾಣಿಕ, ವಿದ್ಯಾವಂತ, ಸುಸಂಸ್ಕೃತ ರಾಜಕಾರಣಿ ೪ ಬಾರಿ ಸೋತಿದ್ದಾರೆ. ಆದರೂ ಬಿಜೆಪಿ ಅವರ ಸೇವೆ ಗುರುತಿಸಿ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡದೆ ಸುಮ್ಮನ್ನಿದ್ದುದನ್ನು ಗಮನಿಸಿ ನನಗೆ ಸಹಾಯ ಮಾಡುವಂತೆ ಕೋರಿದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಜೆಡಿಎಸ್ ಮುಖಂಡರಾದ ಜಿಟಿ ದೇವೇಗೌಡ, ಮಾಜಿ ಶಾಸಕ ನಿರಂಜನ ಕುಮಾರ್ ಮತ್ತಿತರರು ನನ್ನನ್ನು ಸಂಪರ್ಕಿಸಿ ಬಿಜೆಪಿಗೆ ಆಹ್ವಾನ ನೀಡಿದರ ಮೇರೆಗೆ ನಾನು ನಾಳೆ ಬಿಜೆಪಿಗೆ ಯಾವುದೇ ಷರತ್ತಿಲ್ಲದೆ ಸೇರುತ್ತಿದ್ದೇನೆ.

೪೦ ವರ್ಷದಿಂದ ದುಡಿದ ಕಾಂಗ್ರೆಸ್ ಪಕ್ಷವೇ ನನಗೆ ಸ್ಥಾನಮಾನ ಕೊಡಲಿಲ್ಲ. ಈಗ ಬಿಜೆಪಿಗೆ ಹೋಗುತ್ತಿದ್ದೇನೆ. ಸ್ಥಾನಮಾನ ಕೇಳುವುದರಲ್ಲಿ ಕಂಡೀಷನ್ ಹಾಕುವುದರಲ್ಲಿ ಅರ್ಥವಿಲ್ಲ ಎಂದು ಗುರುಪಾದಸ್ವಾಮಿ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು