ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಶ್ವಕರ್ಮ ಸಮುದಾಯದ ಬೆಂಬಲ ಘೋಷಣೆ


 ಮೈಸೂರು : ಕಾಂಗ್ರೆಸ್ ಪಕ್ಷ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ  ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ತನ್ನ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶ್ರೀನಿವಾಸಾಚಾರ್ ಘೋಷಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ನೀಡಿದ್ದ ಭರವಸೆಯಂತೆ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಾಕಷ್ಟು ಅನುದಾನ ನೀಡಿದ್ದರು. ಆದರೇ, ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಿಗಮಕ್ಕೆ ೧೯ ಕೋಟಿ ಹಣ ಕೊಟ್ಟು ಕರೋನಾ ನೆಪ ಹೇಳಿ ವಾಪಸ್ ಪಡೆದರು. ಬಳಿಕ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾ ೧೫ ಕೋಟಿ ಘೊಷಣೆ ಮಾಡಿ ೫ ಕೋಟಿ ಮಾತ್ರ ಕೊಟ್ಟರು. ಆದರೇ ಕಾಂಗ್ರೆಸ್ ಸರ್ಕಾರ ನಮ್ಮ ನಿಗಮಕ್ಕೆ ಒಟ್ಟು ೭೦ ಕೋಟಿ ಹಣ ನೀಡಿದೆ ಎಂದರು.

ಅಲ್ಲದೇ ರಾಜ್ಯಾದ್ಯಂತ ವಿಶ್ವಕರ್ಮ ಭವನಗಳನ್ನು ನಿರ್ಮಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಿಶ್ವಕರ್ಮ ಜಯಂತ್ಯೋತ್ಸವಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಶ್ವಕರ್ಮ ಸಮುದಾಯಕ್ಕೆ ಹೆಚ್ಚು ತಲುಪುತ್ತಿವೆ. ಈ ಕಾರಣದಿಂದ ನಮ್ಮ ಸಮುದಾಯ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ಹೇಳಿದರು.

ವಿಶ್ವಕರ್ಮ ಸಮುದಾಯದ ಕುಶಲಕರ್ಮಿಗಳ ಸಾಲವನ್ನು ಮನ್ನಾ ಮಡಬೇಕು. ವಿಧಾನಸೌಧದ ಆವರಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಪ್ರತಿಮೆ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನೂ ನಾವು ಮುಖ್ಯಮಂತ್ರಿಗಳ ಮುಂದೆ ಇರಿಸಿದ್ದೇವೆ. ನಮ್ಮ ಸಮುದಾಯ ರಾಜ್ಯದಲ್ಲಿ ೪೫ ಲಕ್ಷ ಇದೆ. ನಮಗೆ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಆರ್ಥಿಕವಾಗಿ, ಶೈಕ್ಷಣಿಕವಾಗಿ ನಾವು ಹಿಂದುಳಿದಿದ್ದೇವೆ. ಇದನ್ನೂ ಕೂಡ ಮುಖ್ಯಮಂತ್ರಿಗಳು ಗಮನದಲ್ಲಿಟ್ಟುಕೊಂಡು ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂದು ಅವರು ಕೋರಿದರು.

ರಾಜ್ಯ ವಿಶ್ವಕರ್ಮ ಸಮಾನ ಮನಸ್ಕರುಗಳ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಮೊಗಣ್ಣಾಚಾರ್ ಮಾತನಾಡಿ, ವಿಶ್ವಕರ್ಮ ಸಮುದಾಯದ ಮುಖಂಡರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಇನ್ನೂ ಸಿಕ್ಕಿಲ್ಲ. ಈ ಬೆಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ನಿಗಮಕ್ಕೆ ೧೦೦ ಕೋಟಿ ಅನುದಾನ ನೀಡಬೇಕು. ರಾಜ್ಯದಲ್ಲಿ ತಾಲ್ಲೂಕು ಮಟ್ಟದಲ್ಲಿ ವಿಶ್ವಕರ್ಮ ಭವನ ನಿರ್ಮಾಣ ಮಾಡಬೇಕು. ವಿಶ್ವಕರ್ಮ ಅಧ್ಯಯನ ಪೀಠ ಸ್ಥಾಪನೆ, ಮುಜರಾಯಿ ಇಲಾಖೆ ದೇವಸ್ಥಾನಗಳ ಸಮಿತಿಯಲ್ಲಿ ವಿಶ್ವಕರ್ಮ ಸಮುದಾಯದವರ ಕಡ್ಡಾಯ ನಾಮ ನಿರ್ದೇಶನ ಮಾಡಬೇಕೆಂದು ಅವರು ಒತ್ತಾಯಿಸಿದರು.

ಮೈಸೂರು-ಕೊಡಗು ಮತ್ತು ಚಾಮರಾಜನಗ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ೨ ಲಕ್ಷಕ್ಕೂ ಅಧಿಕ ಮತಗಳು ಇದ್ದು, ಎಲ್ಲವನ್ನೂ ಕಾಂಗ್ರೆಸ್ ಪಕ್ಷಕ್ಕೆ ಹಾಕಿಸುತ್ತೇವೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ  ಬನ್ನೂರು ಎ.ಎನ್.ಸ್ವಾಮಿ, ರಾಜು ವಿಶ್ವಕರ್ಮ, ಎಸ್.ನಾಗರಾಜ್, ಸಿದ್ದಪ್ಪಾಜಿ, ರಾಜು, ಶ್ರೀಲಕ್ಷ್ಮಿ ಮತ್ತಿತರರು ಇದ್ದರು.

ಪಿಎಂ ವಿಶ್ವಕರ್ಮ ಯೋಜನೆ ಅಪ್ರಯೋಜಕ

ಕೇಂದ್ರ ಸರ್ಕಾರ ೧೮ ಜಾತಿಗಳನ್ನು ಸೇರಿಸಿ ಜಾರಿ ಮಾಡಿರುವ ಪಿಎಂ ವಿಶ್ವಕರ್ಮ ಯೋಜನೆ ಒಂದು ರಾಜಕೀಯ ಪ್ರೇರಿತ ಅಪ್ರಯೋಜಕ ಯೋಜನೆ ಇದರಿಂದ ನೇರವಾಗಿ ವಿಶ್ವಕರ್ಮ ಸಮುದಾಯಕ್ಕೆ ಅನುಕೂಲವಾಗಿಲ್ಲ. ಇಲ್ಲಿ ಅರ್ಜಿ ಹಾಕವುದೇ ಒಂದು ಸಾಹಸದ ಕೆಲಸ. ನಮ್ಮ ಸಮುದಾಯದ ಜನರಿಗೆ ಮರಳು ಮಾಡಲು ಈ ಯೋಜನೆ ಜಾರಿಮಾಡಿದ್ದಾರೆ. ಇದರಿಂದ ಪ್ರಯೋಜನ ಪಡೆವರು ಕಡಿಮೆ.

ಶ್ರೀನಿವಾಸಾಚಾರ್, ಮಾಜಿ ಅಧ್ಯಕ್ಷರು. ಕವಿಅನಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು