ಬಿಷಪ್ ವಿಲಿಯಂ ಬೆಂಬಲಿಗರ ಶಕ್ತಿ ಪ್ರದರ್ಶನ

ವಾಪಸ್ ಕರೆತರಲು ೧೫ ದಿನ ಗಡುವು, ಆಡಳಿತಾಧಿಕಾರಿಗೆ ಮನವಿ 

ಮೈಸೂರು : ವಿವಿಧ ಆರೋಪಗಳನ್ನು ಹೊತ್ತು ದೀರ್ಘಾವಧಿ ರಜೆಯ ಮೇಲೆ ತೆರಳಿರುವ ಮೈಸೂರು ಡಯಾಸೀಸ್ ಪ್ರಾಂತ್ಯದ ಕ್ರೈಸ್ತ ಧರ್ಮಗುರು ಡಾ.ಕೆ. ಅಂತೋಣಿ ವಿಲಿಯಂ ಬೆಂಬಲಿಗರು ಇಲ್ಲಿನ ಬಿಷಪ್ ನಿವಾಸದೆದುರು ಶಕ್ತಿ ಪ್ರದರ್ಶನ ನಡೆಸಿ ಕೂಡಲೇ ವಿಲಿಯಂ ಅವರನ್ನು ವಾಪಸ್ ಕರೆತರಬೇಕೆಂದು ಆಡಳಿತಾಧಿಕಾರಿ ಬೆರ್ನಾಡ್ ಮೋರೆಸ್ ಅವರಿಗೆ ಮನವಿ ಸಲ್ಲಿಸಿದರು.

ಗುರುವಾರ ಮದ್ಯಾಹ್ನ ೧೨ ಗಂಟೆಗೆ ನಗರದ ಬನ್ನಿಮಂಟಪದ ಬಳಿ ಇರುವ ಬಿಷಪ್ ಹೌಸ್ ’ಸನ್ಮಾರ್ಗಿ’ ಎದುರು ಜಮಾಯಿಸಿದ ೨೦೦ಕ್ಕೂ ಹೆಚ್ಚು ಕ್ರೈಸ್ತ ಸಮುದಾಯದವರು ವಿವಿಧ ಧರ್ಮಗುರುಗಳ ನೇತೃತ್ವದಲ್ಲಿ ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಬೆರ್ನಾಡ್ ಮೋರೆಸ್ ಅವರಿಗೆ ಮನವಿ ಸಲ್ಲಿಸಿದರು.
ಬಿಷಪ್ ಡಾ.ಕೆ. ಅಂತೋಣಿ ವಿಲಿಯಂ ಒಬ್ಬ ಪ್ರಾಮಾಣಿಕ ಧರ್ಮಾಧಿಕಾರಿಯಾಗಿದ್ದರು, ಹಣಕಾಸಿನ ವ್ಯವಹಾರದಲ್ಲಿ ಕಟ್ಟುನಿಟ್ಟಾಗಿದ್ದ ಕಾರಣ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ಫಾದರ್ ಜ್ಞಾನಪ್ರಕಾಶ್ ಮತ್ತಿತರರು ಸಂಚು ರೂಪಿಸಿ ವಿಲಿಯಂ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಇವೆಲ್ಲವೂ ಸುಳ್ಳು ಆರೋಪಗಳು. ಈ ಬಗ್ಗೆ ಈಗಾಗಲೇ ಆಂತರಿಕ ತನಿಖೆ ನಡೆದಿದೆ ಇನ್ನು ೧೫ ದಿನದೊಳಗೆ ಬಿಷಪ್ ಡಾ.ಕೆ. ಅಂತೋಣಿ ವಿಲಿಯಂ ಅವರನ್ನು ವಾಪಸ್ ಕರೆತರಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿಲಿಯಂ ಬೆಂಬಲಿಗರು ಒತ್ತಾಯಿಸಿದರು.
ಇತ್ತೀಚೆಗೆ ಫಾದರ್ ಜ್ಞಾನಪ್ರಕಾಶ್, ಆರ್ಚ್ ಬಿಷಪ್ ಅಪೋಸ್ಟೋಲಿಕ್ ಮತ್ತು ಒಬ್ಬ ಮಹಿಳೆಯೊಂದಿಗೆ ನಡೆದ ಸಂಭಾಷಣೆ ವೈರಲ್ ಆಗಿದೆ. ಇದರಲ್ಲಿ ೨೦೨೧ ರಲ್ಲಿ ಬಿಷಪ್ ಕೆ.ವಿಲಿಯಂ ಆರೋಪದ ಬಗ್ಗೆ ನಡೆದ ತನಿಖಾ ವರದಿಗಳು ಬಹಿರಂಗಗೊಂಡಿವೆ. ಇದರಿಂದ ತನಿಖೆ ನಡೆಸಿದವರು ಸಂಸ್ಥೆಯ ಗೌಪ್ಯತೆಯನ್ನು ಮತ್ತು ನಂಬಿಕೆಯನ್ನು ಗಾಳಿಗೆ ತೂರಿದ್ದಾರೆ. ಈಗಾಗಲೇ ಮೈಸೂರು ಧರ್ಮ ಪ್ರಾಂತ್ಯದ ೮೦ ಜನ ಧರ್ಮಗುರುಗಳು ಆಡಳಿತಾಧಿಕಾರಿಯನ್ನು ಭೇಟಿ ಮಾಡಿ ಬಿಷಪ್ ವಿಲಿಯಂ ಜೀವಕ್ಕೆ ಸಂಚಾಕಾರ ಇರುವ ಬಗ್ಗೆ ಚರ್ಚಿಸಿದ್ದಾರೆ. ಮತ್ತು ವೈರಲ್ ಆಗಿರುವ ಆಡಿಯೋ ಬಗ್ಗೆ ತನಿಖೆಗೂ ಒತ್ತಾಯಿಸಿದ್ದಾರೆ.  ಕೂಡಲೇ ಆಡಳಿತಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.  
ಈ ಸಂದರ್ಭದಲ್ಲಿ ಮ್ಯಾಥ್ಯೂ ಬೆಂಜಮಿನ್ ಸುರೇಶ್, ಫಾ. ಜಾನ್ ಸಿಕ್ವೇರಾ, ಫಾ. ಡೇವಿಡ್ ಸಗಾಯ್, ಫಾ. ಮದುಲೆಮುತ್ತು, ಫಾ.ಜೆರಾಲ್ಡ್ ಕ್ಯಾಸ್ಟಲಿನೋ ಮುಂತಾದವರು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು