ಜಮೀನಿಗೆ ಅತಿಕ್ರಮ ಪ್ರವೇಶ : ೭೦ ಮರಗಳ ಹನನ

ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಮುಖ್ಯಸ್ಥರ ವಿರುದ್ಧ ಮಹಿಳೆ ಆರೋಪ 

ಪಾಂಡವಪುರ : ತಮ್ಮ ಜಮೀನಿಗೆ ಖಾಸಗಿ ಶಿಕ್ಷಣ ಸಂಸ್ಥೆಯವರು ಅತಿಕ್ರಮ ಪ್ರವೇಶ ಮಾಡಿ, ಬೆಲೆಬಾಳುವ 70 ಮರಗಳನ್ನು ಅಕ್ರಮವಾಗಿ ಕಡಿದು ಹಾಕಿದ್ದಾರೆಂದು ಬಿಂದು ಪಟೇಲ್ ಎಂಬ ಮಹಿಳೆಯೊಬ್ಬರು ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಲ್ಲೂಕಿನ ಜಯಂತಿನಗರ ಗ್ರಾಮದ ಬಳಿ ಇರುವ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಪಂಚಲಿಂಗೇಗೌಡ ಎಂಬವರು ತಮ್ಮ ಜಮೀನು ಕಬಳಿಸಲು ಹಲವು ಬಾರಿ ಪ್ರಯತ್ನ ನಡೆಸಿದ್ದು, ಅವರಿಗೆ ತಾವು ಜಮೀನು ನೀಡದಿದ್ದ ಕಾರಣದಿಂದ ಪಾಂಡವಪುರ ಸರ್ವೆ ಅಧಿಕಾರಿಗಳಿಗೆ ಹಣ ನೀಡಿ ತಮ್ಮ ಬಾಬ್ತು 7 ಕುಂಟೆ ಜಮೀನು ಒತ್ತುವರಿ ಮಾಡಿಕೊಂಡು ಅದರಲ್ಲಿ ಬೆಳೆದಿದ್ದ ಸುಮಾರು 2 ಲಕ್ಷ ರೂ ಮೌಲ್ಯದ 70 ಸಿಲ್ವರ್, ಹೆಬ್ಬೇವು, ಅಡಕೆ ಮತ್ತು ಅದರ ಮೇಲೆ ಬೆಳೆಸಿದ್ದ ಮೆಣಸು ಗಿಡಗಳನ್ನು ಕಡಿದು ಹಾಕಿದ್ದಾರೆಂದು ದೂರು ನೀಡಿದ್ದಾರೆ.
ಪಾಂಡವಪುರ ತಾಲ್ಲೂಕು ಕೆನ್ನಾಳು ಗ್ರಾಮದ ಸರ್ವೆ ನಂ 192/2 ರಲ್ಲಿ ತಾವು 2 ಎಕರೆ 26 ಕುಂಟೆ ಮತ್ತು 3 ಕುಂಟೆ ಖರಾಬು ಜಮೀನನ್ನು ತಾವು 2006 ರಲ್ಲಿ ಖರೀದಿ ಮಾಡಿ ಅನುಭವದಲ್ಲಿ ಇದ್ದೇವೆ. ನಮ್ಮ ಜಮೀನು ಕಬಳಿಸಲು ಬಾಜುದಾರರಾದ ಪಂಚಲಿಂಗೇಗೌಡ ಅವರು ಹವಣಿಸುತ್ತಿದ್ದರು. ಜಮೀನು ಮಾರುವಂತೆ ಹಲವು ಬಾರಿ ಒತ್ತಡವನ್ನು ತಂದಿದ್ದರು. ತಾವು ಜಮೀನು ಮಾರಾಟ ಮಾಡುವುದಿಲ್ಲ ಎಂದಾಗ ನಿಮ್ಮ ಜಮೀನಿನಲ್ಲಿ ನಮಗೆ ಸೇರಿದ ಜಮೀನು ಇದೆ ಎಂದು ಪದೇ ಪದೇ ಅಳತೆ ಮಾಡಿಸಿ ಅಳತೆಗೆ ಬರುವ ಸರ್ವೆ ಅಧಿಕಾರಿಗಳಿಗೆ ಹಣದ ಆಮಿಷ ನೀಡಿ ನಮ್ಮ ಜಮೀನು ಕಬಳಿಸಿದ್ದಾರೆ. ಶನಿವಾರ ಅಳತೆ ಮಾಡುವ ನೆಪ ಮಾಡಿಕೊಂಡು ನಮ್ಮ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ನೆಟ್ಟು ನಮ್ಮ ಜಮೀನಿನ ತಂತಿಬೇಲಿ ಕಿತ್ತು ಬೆಲೆಬಾಳುವ ಮರಗಳನ್ನು ಕಡಿದಿದ್ದಾರೆಂದು ಅವರು ಹೇಳಿದರು.

ನಮ್ಮ ಬಾಜುದಾರರಾದ ಶಂಭುಲಿಂಗೇಶ್ವರ ಟ್ರಸ್ಟ್‍ಗೆ ಇದೇ ಗ್ರಾಮದ ಸರ್ವೆ ನಂ.191/1 ರಲ್ಲಿ 2 ಎಕರೆ 24 ಕುಂಟೆ ಜಮೀನು ಇದೆ. ಇದಕ್ಕೆ 24 ಕುಂಟೆ ಖರಾಬು ಸೇರಿದೆ. ಆದರೇ ಅವರು ಹಾಲಿ 4 ಎಕರೆ 13 ಕುಂಟೆ ಜಮೀನು ಅನುಭವದಲ್ಲಿದ್ದಾರೆ. ಜತೆಗೆ ನಮ್ಮ ಜಮೀನನ್ನೂ ಕಬಳಿಸಲು ಸಂಚು ಮಾಡುತ್ತಿದ್ದಾರೆಂದು ಹೇಳಿದರು.
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೆ ಅವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಪೊಲೀಸರಿಗೆ ಹೇಳಿದರೆ ಇದು ಸಿವಿಲ್ ಮ್ಯಾಟರ್ ಎಂದು ಕಳಿಸುತ್ತಾರೆ. ನಾನು ಒಬ್ಬ ಮಹಿಳೆಯಾಗಿದ್ದು, ನಮ್ಮ ಜಮೀನು ಕಬಳಿಸಲು ಹೊಂಚು ಹಾಕಿರುವ ವ್ಯಕ್ತಿಗೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಾವು ದೂರು ನೀಡುವುದಾಗಿ ಬಿಂದು ಪಟೇಲ್ ಹೇಳಿದರು.
ಸರ್ವೆ ಅಧಿಕಾರಿಗಳು ಶಾಮೀಲು
ಈಗಾಗಲೇ 8 ಬಾರಿ ಅಳತೆ ಮಾಡಲಾಗಿದೆ. ಯಾವ ಸರ್ವೆ ಅಧಿಕಾರಿಗಳು ಅಳತೆಗೆ ಬಂದರೂ ಮೂಲ ಕಲ್ಲಿನಿಂದ ಅಳತೆ ಮಾಡುವುದಿಲ್ಲ. ಪಂಚಲಿಂಗೇಗೌಡರಿಗೆ ಅನುಕೂಲ ಮಾಡಲು ಅಗತ್ಯವಾದ ಸ್ಥಳದಿಂದ ಅಳತೆ ಮಾಡುತ್ತಾ ನನಗೆ ಮೋಸ ಮಾಡುತ್ತಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರೂ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಂದು ಪಟೇಲ್, ನೊಂದ ಮಹಿಳೆ
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು