ʻಸೌಲಭ್ಯ ವಂಚಿತ ರಮ್ಮನಹಳ್ಳಿʼ :ಶಾಸಕ ಜಿಟಿಡಿ ಕಡೆಗಣನೆ: ಎಸ್‌ಡಿಪಿಐ ಆರೋಪ
ಸೆಪ್ಟೆಂಬರ್ 07, 2023
ಮೈಸೂರು : ನಗರದ ಕೂಗಳತೆ ದೂರದಲ್ಲಿರುವ
ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ರಮ್ಮನಹಳ್ಳಿ ಗ್ರಾಮ ಸಾಕಷ್ಟು ಮೂಲಭೂತ
ಸೌಲಭ್ಯಗಳಿಂದ ವಂಚಿತವಾಗಿದ್ದು, ಶಾಸಕ ಜಿ.ಟಿ.ದೇವೇಗೌಡ ರಮ್ಮನಹಳ್ಳಿ ಗ್ರಾಮದ ಅಭಿವೃದ್ಧಿಗೆ
ನಿರ್ಲಕ್ಷ್ಯ ತಾಳಿದ್ದಾರೆಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ರಫತ್ ಖಾನ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,
ಪಟ್ಟಣ ಪಂಚಾಯ್ತಿ ಮಾನ್ಯತೆ ಹೊಂದಿರುವ ರಮ್ಮನಹಳ್ಳಿ ಒಂದು ಕುಗ್ರಾಮಕ್ಕಿಂತಲೂ ಕಡೆಯಾಗಿದೆ.
ಇಲ್ಲಿನ ರಸ್ತೆಗಳು ಡಾಂಬರ್ ಕಂಡು ಅದೆಷ್ಟೋ ವರ್ಷಗಳಾಗಿದೆ. ಗ್ರಾಮದಿಂದ ಪ್ರತಿನಿತ್ಯ ನೂರಾರು ಮಕ್ಕಳು ಶಾಲಾ ಕಾಲೇಜುಗಳಿಗೆ ಮೈಸೂರಿಗೆ
ತೆರಳಲು ಸಾರಿಗೆ ಸಂಸ್ಥೆಯ ಬಸ್ ಅವಲಂಬಿಸಿದ್ದು, ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ
ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಬೆಳಗ್ಗೆ ಬರುವ ಎರಡು ಬಸ್ಗಳು ಗ್ರಾಮಕ್ಕೆ ಬರುವಾಗಲೇ
ಜನರಿಂದ ತುಂಬಿ ತುಳುಕುವ ಕಾರಣ ಪ್ರಾಥಮಿಕ ಶಾಲೆಗಳಿಗೆ ಹೋಗುವ ಇಲ್ಲಿನ ಪುಟ್ಟ ಪುಟ್ಟ ಮಕ್ಕಳು
ಬಸ್ ಹತ್ತಲು ಆಗದೆ ಕಷ್ಟ ಪಡುತ್ತಿದ್ದಾರೆ. ಅಲ್ಲದೇ ಗ್ರಾಮದಿಂದ ಮೈಸೂರಿಗೆ ಆಸ್ಪತ್ರೆಗಳಿಗೆ
ತೆರಳಲು ರೋಗಿಗಳು, ಗರ್ಭಿಣಿಯರು, ವೃದ್ಧರು ಸಹ ಬಸ್ ಸೌಲಭ್ಯವಿಲ್ಲದೆ ಖಾಸಗಿ ವಾಹನ
ಅವಲಂಬಿಸಿದ್ದಾರೆ. ಈ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಕೂಡಲೇ ಕ್ರಮಕ್ಕೆ ಮುಂದಾಗಿ ಹೆಚ್ಚು ಬಸ್
ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ೨೦ ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆಯುಳ್ಳ
ದೊಡ್ಡ ಗ್ರಾಮವಾಗಿದ್ದರೂ ಇಲ್ಲಿ ಐದು ದಿನಕ್ಕೊಮ್ಮೆ ನೀರು ಬರುತ್ತಿದೆ. ಸರ್ಕಾರಿ ಪ್ರೌಢಶಾಲೆ,
ಜಾನುವಾರು ಆಸ್ಪತ್ರೆ, ಲೈಬ್ರರಿ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಸಮರ್ಪಕ ವೈದ್ಯಕೀಯ
ಸೌಲಭ್ಯ ದೊರಕುತ್ತಿಲ್ಲ. ಗ್ರಾಮದ ಬಾಜುವಿನಲ್ಲಿ ಹರಿಯುವ ವರುಣಾ ನಾಲೆಯ ಸೇತುವೆ ಶಿಥಿಲವಾಗಿ
ಕುಸಿಯುವ ಭೀತಿ ಎದುರಾಗಿದೆ. ಯುಜಿಡಿ ಕಾಮಗಾರಿ ಅಪೂರ್ಣವಾಗಿದೆ. ಇಲ್ಲಿನ ಬಹುತೇಕ ಜನರು ಸಣ್ಣ
ವ್ಯಾಪಾರಸ್ಥರು, ಮತ್ತು ಕೂಲಿ ಕಾರ್ಮಿಕರು. ಬೆಳಗ್ಗೆ ಊರು ಬಿಟ್ಟರೆ ಸಂಜೆ ವಾಪಸ್ ಬರುವ ಕಾರಣ
ಗ್ರಾಮದ ಸಮಸ್ಯೆಗಳಿಂದ ಬಳುತ್ತಿರುವುದು ಇಲ್ಲಿನ ಮಹಿಳೆಯರು. ಚುನಾವಣೆ ಬಳಿಕ ಇತ್ತ ತಲೆ ಹಾಕದ ಶಾಸಕ
ಜಿ.ಟಿ.ದೇವೇಗೌಡರು ಕೂಡಲೇ ರಮ್ಮನಹಳ್ಳಿ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಿ ಗ್ರಾಮದ ಸಮಸ್ಯೆಗಳ
ನಿವಾರಣೆ ಮಾಡಬೇಕೆಂದು ರಫತ್ ಖಾನ್ ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು