ಮಾಧಕ ವಸ್ತುಗಳ ಮಾರಾಟ ತಡೆಗಟ್ಟಲು ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯ
ಜುಲೈ 04, 2023
ಮೈಸೂರು : ನಗರದಲ್ಲಿ ದಿನೇ ದಿನೇ ಮಾಧಕ ವ್ಯಸನಿಗಳಿಂದ ಅಪರಾಧ ಪ್ರಕರಣಗಳು ಜಾಸ್ತಿಯಾಗಿದ್ದು, ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದ್ದಾರೆ. ಸೋಮವಾರ ಮಂಡಿ ಪೊಲೀಸ್ ಠಾಣೆಗೆ ಅವರು ಭೇಟಿ ನೀಡಿ ನಶೆಯಲ್ಲಿದ್ದ ಬಾಲಕನೊಬ್ಬ ಮತ್ತೊಬ್ಬ ಬಾಲಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಸಂಬಂಧ ಪೊಲೀಸರಿಂದ ಮಾಹಿತಿ ಪಡೆದು ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ನಗರದಾದ್ಯಂತ ಮಾಧಕ ವಸ್ತುಗಳ ಮಾರಾಟ ಜಾಲ ಹೆಚ್ಚಾಗಿದೆ. ನಿರುದ್ಯೋಗಿಗಳು, ಅಪ್ರಾಪ್ತರು, ಯುವಕರು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರುಗಳು, ಮಹಾನಗರ ಪಾಲಕೆ ಸದಸ್ಯರು ಪೊಲೀಸರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗದಿದ್ದರೇ. ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ. ಈ ಹಿಂದೆಯೂ ಎನ್‌ಆರ್ ಕ್ಷೇತ್ರದ ಅಲ್ ಬದರ್ ವೃತ್ತದಲ್ಲಿ ಮಾಧಕ ವ್ಯಸನಿಯೊಬ್ಬ ವ್ಯಕ್ತಿಯೊಬ್ಬನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ಸುನ್ನಿ ಚೌಕ್‌ನಲ್ಲಿ ಮತ್ತೊಂದು ಕೊಲೆ ನಡೆದಿರುವುದು ಆತಂಕಕಾರಿ ಎಂದರು. ಮೈಸೂರು ನಗರದಾದ್ಯಂತ ಮಾಧಕ ವಸ್ತುಗಳ ಮಾರಾಟ ಜಾಲ ಇರುವ ಬಗ್ಗೆ ಸಿಸಿಬಿ ದಾಳಿಗಳೇ ಸಾಕ್ಷಿಯಾಗಿವೆ. ಪೊಲೀಸರು ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಬೇಕು. ಅಪರಾಧಿಗಳು ಯಾರೇ ಆದರೂ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡು ಅನಾಹಿತಗಳನ್ನು ತಪ್ಪಿಸಬೇಕು. ನಾಗರಿಕರೂ ಕೂಡ ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ ಅವರಿಗೆ ಸೂಕ್ತ ತಿಳಿವಳಿಕೆ ನಿಡುವುದಲ್ಲದೇ ಪೊಲೀಸರಿಗೂ ಸಹಕರಿಸಬೇಕೆಂದು ಅವರು ಕೋರಿದರು. ಬಳಿಕ ಅವರು ಮೃತ ಬಾಲಕನ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಮೆಡಿಕಲ್ ಶಾಪ್‌ನಲ್ಲೂ ದಂಧೆ: ಮಾಧಕ ವಸ್ತುಗಳ ಮಾರಾಟಕ್ಕೆ ಅಮಾಯಕ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೆಡಿಕಲ್ ಸ್ಟೋರ್‌ಗಳಲ್ಲೂ ಡ್ರಗ್ಸ್ ಲಭ್ಯವಾಗುತ್ತಿದೆ ಎನ್ನುವ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾರಾಟ ಜಾಲವನ್ನು ಪತ್ತೆ ಹಚ್ಚಿ ಯುವ ಜನಾಂಗದ ಪ್ರಾಣವನ್ನು ಕಾಪಾಡಬೇಕೆಂದು ಅವರು ಕೋರಿದರು.
ಮೈಸೂರು ಡ್ರಗ್ಸ್ ನಗರವಾಗದಿರಲಿ :
ಸಾಂಸ್ಕೃತಿಕ ನಗರಿ ಮೈಸೂರು ಡ್ರಗ್ಸ್ ನಗರವಾಗುವ ಅಪಾಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾದ ಮೈಸೂರಿನಲ್ಲಿ ಇಂತಹ ಮಾರಾಟ ಜಾಲ ಶೀಘ್ರದಲ್ಲೇ ಪತ್ತೆ ಹಚ್ಚಬೇಕು. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರೂ ಸಹ ಮಾಧಕ ವಸ್ತುಗಳ ಮಾರಾಟ ಜಾಲದ ನಿಯಂತ್ರಣ ಮಾಡಲು ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಕೋರಿದರು.
0 ಕಾಮೆಂಟ್‌ಗಳು