ಕೆ.ಹೆಚ್‌.ರಾಮಯ್ಯರನ್ನು ಮರೆತ ಆದಿ ಚುಂಚನಗಿರಿ ಮಠ : ಡಾ.ಯೋಗಣ್ಣ ಬೇಸರ

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ವಿಕಾಸ ಶ್ರೀ ಪ್ರಶಸ್ತಿ ಪ್ರದಾನ

ಮೈಸೂರು: ದೇಶದೆಲ್ಲೆಡೆ ಬೃಹದಾಕಾರವಾಗಿ ಬೆಳೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಆದಿ ಚುಂಚನಗಿರಿ ಮಠವನ್ನು ಉಳಿಸಿ, ಬೆಳೆಸಿದ ದಿವಂಗತ ಕೆ.ಎಚ್.ರಾಮಯ್ಯ ಅವರನ್ನು ಶ್ರೀಮಠವೇ ಮರೆತಿರುವುದು ವಿಪರ್ಯಾಸ ಎಂದು ಸುಯೋಗ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪಿ.ಯೋಗಣ್ಣ ಬೇಸರ ವ್ಯಕ್ತಪಡಿಸಿದರು.
ದಿ.ಕೆ.ಎಚ್.ರಾಮಯ್ಯ ಹುಟ್ಟುಹಬ್ಬದ ಪ್ರಯುಕ್ತ ನಗರದ ಪುರಭವನದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಏರ್ಪಡಿಸಿದ್ದ ಒಕ್ಕಲಿಗ ಸಮುದಾಯದ ಸಾಧಕರಿಗೆ ಬಾಲ ವಿಕಾಸ ಶ್ರೀ, ಯುವ ವಿಕಾಸ ಶ್ರೀ ಮತ್ತು ವಿಕಾಸ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದವರು ಮತ್ತು ಒಕ್ಕಲಿಗ ಸಮುದಾಯಕ್ಕೆ ರಾಮಯ್ಯ ಅವರು ಮಾಡಿರುವ ಸೇವೆಯನ್ನು ಪರಿಗಣಿಸಿ ರಾಜ್ಯ ಒಕ್ಕಲಿಗರ ಸಂಘ ಮತ್ತು ಆದಿ ಚುಂಚನಗಿರಿ ಮಠದವರು ರಾಜ್ಯವ್ಯಾಪಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಿತ್ತು. ಆದರೆ ಹಾಗಾಗದಿರುವುದು ವಿಷಾದಕರ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 
ಇಂದು ಸಮುದಾಯದ ಜನರ ಪರವಾಗಿ ಕೆಲಸ ಮಾಡಲು ಹಲವಾರು ಸೇವಾ ಸಂಸ್ಥೆಗಳು, ಸಮಾಜ ಸೇವಕರು ಹುಟ್ಟಿಕೊಂಡಿದ್ದಾರೆ. ಸರ್ಕಾರ, ಕಾನೂನು ಎಲ್ಲವೂ ಇದೆ. ಆದರೇ, ಅಂದಿನ ಕಾಲದಲ್ಲಿ ಪುರೋಹಿತಶಾಹಿಗಳಲ್ಲಿ ಮಾತ್ರ ಶಿಕ್ಷಣ ಉದ್ಯೋಗ ಸಾಮಾಜಿಕ ಸ್ಥಾನಮಾನಗಳು ಕೇಂದ್ರೀಕೃತವಾಗಿದ್ದವು. ಅಂದಿನ ಮಹಾ ಮೇಧಾವಿ ವಿಶ್ವೇಶ್ವರಯ್ಯ ಸಹ ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿರೋಧಿಸಿ ದಿವಾನ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋಗಿದ್ದರು. ಅಂತಹ ಸಂದರ್ಭದಲ್ಲಿ ಕೆ.ಎಚ್.ರಾಮಯ್ಯ ಅವರು ದನಿ ಇಲ್ಲದವರ ಪರ ದನಿ ಎತ್ತಿದರು. ಸಮುದಾಯದಲ್ಲಿ  ಯಾವುದೇ ರೀತಿಯ ಶಕ್ತಿ ಇಲ್ಲದಂತಹ ದಿನಗಳಲ್ಲಿ ತುಳಿಯಲ್ಪಟ್ಟ ಹಿಂದುಳಿದ ವರ್ಗದವರಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೀಸಲಾತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ವಿವರಿಸಿದರು.
ಸಮುದಾಯದ ಮಕ್ಕಳು ಶಿಕ್ಷಣ ಪಡೆಯಲಿ ಎಂದು ಕೆ.ಎಚ್.ರಾಮಯ್ಯ ಅವರು  ಹಲವಾರು ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು. ಇಂದು ಲಕ್ಷಾಂತರ ವಿದ್ಯಾರ್ಥಿಗಳು ಈ ವಿದ್ಯಾರ್ಥಿನಿಲಯಗಳಲ್ಲಿ ಅನ್ನ, ಆಸರೆ ಪಡೆದು ಶಿಕ್ಷಿತರಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ. ಅನೇಕರು ಕೆಎಎಸ್, ಐಎಎಸ್ ಅಧಿಕಾರಿಗಳಗಿದ್ದಾರೆ ಆದರೆ, ಯಾರೊಬ್ಬರೂ ಕೂಡ ರಾಮಯ್ಯ ಅವರಂತಾಗಲಿಲ್ಲ. ಸಮುದಾಯದ ಏಳಿಗೆಗೆ ಶ್ರಮಿಸುತ್ತಿಲ್ಲ.
ಒಕ್ಕಲಿಗ ಸಮುದಾಯ ಸಂಘಟಿತವಾಗಲಿ ಎಂದು ಒಕ್ಕಲಿಗರ ಸಂಘವನ್ನು ದೂರದೃಷ್ಟಿಯಿಂದ ಕಟ್ಟಿದ್ದರು. ಆದರೆ, ಈಗ ಅದು ಭ್ರಷ್ಟಾಚಾರದ ಕೊಂಪೆಯಾಗಿದೆ ಈ ಬಗ್ಗೆ ಸಮುದಾಯದ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಯೋಗಣ್ಣ ಖಾರವಾಗಿ ನುಡಿದರು.

ಈ ಸಮಾಜವನ್ನು ತಿದ್ದಲು ಕೆ.ಎಚ್.ರಾಮಯ್ಯ ನವರಂತಹ ದಾರ್ಶನಿಕರು ಮತ್ತೆ ಹುಟ್ಟಬೇಕಿದೆ. ನಾವುಗಳು ಅವರ ಡಿಎನ್‌ಎ ನಲ್ಲಿ  ಹುಟ್ಟಿರುವುದೇ ನಮ್ಮ ಪುಣ್ಯ. ಒಕ್ಕಲಿಗರ ವಿಕಾಸ ವೇದಿಕೆ ರಾಮಯ್ಯ ಅವರ ಹುಟ್ಟಿದ ದಿನದಂದು ಸಮುದಾಯದ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅತ್ಯಂತ ಸಮಯೋಚಿತ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಕ್ಕಲಿಗ ಸಮುದಾಯದ ಮಕ್ಕಳು, ಯುವಕರು ಮತ್ತು ಹಿರಿಯರಿಗೆ ಬಾಲ ವಿಕಾಸ ಶ್ರೀ, ಯುವ ವಿಕಾಸ ಶ್ರೀ ಮತ್ತು ವಿಕಾಸ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕು.ಬಿಂದುಶ್ರೀ ಭರತನಾಟ್ಯ ಪ್ರದರ್ಶಿಸಿದರು.
ಕುಣಿಗಲ್ ತಾಲೂಕು ಅರೇ ಶಂಕರ ಮಹಾ ಸಂಸ್ಥಾನ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ವೇದಿಕೆ ಗೌರವಾಧ್ಯಕ್ಷ ಎಚ್.ಕೆ.ರಾಮು, ಅಧ್ಯಕ್ಷೆ ಎಚ್.ಎಲ್.ಯಮುನಾ, ರಾಮಕೃಷ್ಣೇಗೌಡ, ಗೌಡ್ತಿಯರ ಸೇನೆ ರಾಜ್ಯಾಧ್ಯಕ್ಷೆ ರೇಣುಕಾ ಭಕ್ತರಹಳ್ಳಿ, ಕೆ.ಆರ್.ಮಿಲ್ ಶಿವಣ್ಣ, ಕ್ರಾಂತಿಸಿಂಹ, ದೇವಿ ಪ್ರಸಾದ್, ಬಿ.ಎಸ್.ರವೀಶ್ ಮುಂತಾದವರು ಹಾಜರಿದ್ದರು.

ಕುವೆಂಪು ಪ್ರಕಾಶ್‌ಗೆ ಪ್ರಶಸ್ತಿ

ಕಳೆದ ೪೦ ವರ್ಷಗಳಿಂದ ಕನ್ನಡ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ೬೦ ದೇಶಗಳಲ್ಲಿ  ಕುವೆಂಪು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದೇನೆ. ಶೀಘ್ರದಲ್ಲೆ ಜಪಾನ್ ದೇಶದ ಟೋಕಿಯೋ ನಗರದಲ್ಲಿ ಕುವೆಂಪು ಕಲಾ ಉತ್ಸವ ಆಯೋಜಿಸಿದ್ದೇನೆ. ನನ್ನ ಕನ್ನಡ ಸೇವೆಯನ್ನು ಪರಿಗಣಿಸಿ ನನಗೆ ವಿಕಾಸ ಶ್ರೀ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ.

ಕುವೆಂಪು ಪ್ರಕಾಶ್, ಅಧ್ಯಕ್ಷರು, ಕುವೆಂಪು ಕಲಾನಿಕೇತನ, ಬೆಂಗಳೂರು.


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು