•ಕಾಂಗ್ರೆಸ್‍ನ ಗ್ಯಾರಂಟಿ ಕಾರ್ಡ್ ನೋಡಿ ನಾವು ಮತ ಹಾಕಿಲ್ಲ •ತನ್ವೀರ್ ಸೇಠ್‍ಗೆ ಮಂತ್ರಿಗಿರಿ ಕೈ ತಪ್ಪಿದ್ದಕ್ಕೆ ಧರ್ಮ ಗುರುಗಳ ಬೇಸರ •ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮದ ಬಗ್ಗೆ ಎಚ್ಚರಿಕೆ •ಶೀಘ್ರದಲ್ಲೇ ಮುಸ್ಲಿಂ ಧರ್ಮಗುರುಗಳ ನಿಯೋಗದಿಂದ ಸಿಎಂ ಭೇಟಿ
ಮೈಸೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮುಸ್ಲಿಂ ಶಾಸಕರಿಗೆ ಅನ್ಯಾಯವಾಗಿದೆ. ವಿಶೇಷವಾಗಿ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡದಿರುವದು ಮುಸ್ಲಿಂ ಧರ್ಮ ಗುರುಗಳ ಆಕ್ಷೇಪಕ್ಕೆ ಕಾರಣವಾಗಿದ್ದು, ಇದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಮುಸ್ಲಿಂ ಧರ್ಮ ಗುರುಗಳು ಅಭಿಪ್ರಾಯ ಪಟ್ಟರು. ನಗರದ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಧರ್ಮಗುರು ಮೌಲಾನ ಅರ್ಷದ್ ಅನ್ಸಾರಿ ಅವರು ಮಾತನಾಡಿ, ಮುಸ್ಲಿಂ ಸಮುದಾಯ ನಿಮ್ಮ ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿಲ್ಲ. ಬದಲಾಗಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತು ರಾಜ್ಯ ಮತ್ತು ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಕಿಡಿ ಕಾರಿದರು. ಮೈಸೂರು ನಗರದಲ್ಲಿ ತನ್ವೀರ್ ಸೇಠ್ ಒಬ್ಬರನ್ನೆ ನಾವು ಗೆಲ್ಲಿಸಿಲ್ಲ. ಬದಲಾಗಿ ಚಾಮರಾಜ ಕ್ಷೇತ್ರದಲ್ಲಿ ಹರೀಶ್ ಗೌಡ ಅವರನ್ನೂ ಸಹ ಗೆಲ್ಲಿಸಿದ್ದೇವೆ. ಅಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸಿದೆ. ಇದೇ ರೀತಿ ರಾಜ್ಯದಲ್ಲಿ ಗೆಲುವು ಸಾಧಿಸಿರುವ ಮುಸ್ಲಿಂ ಶಾಸಕರನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲೂ ನಮ್ಮ ಸಮುದಾಯವೇ ಶೇ,88 ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಇನ್ನೇನು ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಚುನಾವಣಾ ಪ್ರಚಾರದ ವೇಳೆ ನಾವುಗಳು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಾರೆ. ಇವರಿಬ್ಬರು ನಾಯಕರೂ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸುತ್ತಾರೆ. ಸತತವಾಗಿ 6ಬಾರಿ ಜಯಗಳಿಸಿರುವ ತನ್ವೀರ್ ಸೇಠ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದು ಮತದಾರರಿಗೆ ತಿಳಿಸಿ ಮತ ಯಾಚನೆ ಮಾಡಲಾಗಿತ್ತು. ಈಗ ತನ್ವೀರ್ ಅವರಿಗೆ ಸಚಿವ ಸ್ಥಾನವನ್ನೂ ಸಹ ನೀಡುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ನಾವು ಯಾವ ಮುಖ ಹೊತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮೌಲಾನ ಅಯ್ಯೂಬ್ ಅನ್ಸಾರಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಬಗ್ಗೆ ಮುನ್ಸೂಚನೆಯಾಗಿದೆ. ನರಸಿಂಹರಾಜ ಕ್ಷೇತ್ರದಲ್ಲಿ ಮುಸ್ಲಿಂ, ದಲಿತ, ಹಿಂದುಳಿದ ಮತ್ತು ಇತರೆ ಸಮುದಾಯದ ಮತದಾರರು ತನ್ವೀರ್ ಸೇಠ್ ಅವರ ಗೆಲುವಿಗಾಗಿ ಶ್ರಮಿಸಿದ್ದಾರೆ. ಆದರೇ ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಭಾರಿ ನಿರಾಸೆ ಮೂಡಿದೆ. ಕನಿಷ್ಠ ಐದು ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಆದರೇ ಇಬ್ಬರಿಗೆ ಮಾತ್ರ ಸಚಿವ ಸಂಪುಟದಲ್ಲಿ ಅವಕಾಶ ನೀಡಿರುವುದು ಸಮುದಾಯದ ಜನರಿಗೆ ಬೇಸರ ತಂದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ತಜ್ಞ ಪ್ರೊ.ನಬೀ ಜಾನ್, ಮುಖಂಡರಾದ ಫಾಜೀಲ್ ಚಾಂದ್, ಸೈಯದ್ ಯೂನುಸ್, ಶಫಿ ಅಹಮದ್, ಮೊಹಮ್ಮದ್ ಇದ್ರೀಸ್, ಪ್ರೊ.ನಸೀಮುದ್ದೀನ್, ಕ್ರೈಸ್ತ ಧರ್ಮ ಗುರುಗಳಾದ ಫಾದರ್ ಅಭಿಶೇಕ್, ಸ್ಟೀಫನ್ ಮುಂತಾದವರು ಇದ್ದರು. ಮುಸ್ಲಿಂ ಧರ್ಮ ಗುರುಗಳ ನಿಯೋಗದಿಂದ ಸಿಎಂ ಭೇಟಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವಲ್ಲಿ ಮುಸ್ಲಿಂ ಸಮುದಾಯದ ಕೊಡುಗೆ ಅಪಾರವಾಗಿದೆ. ಸಚಿವ ಸಂಪುಟದಲ್ಲಿ ಕನಿಷ್ಠ 5 ಜನ ಮುಸ್ಲೀಂ ಶಾಸಕರಿಗೆ ಅವಕಾಶ ನೀಡಬೇಕು. ವಿಶೇಷವಾಗಿ ತನ್ವೀರ್ ಸೇಠ್ ಅವರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಈ ಬಗ್ಗೆ ಶೀಘ್ರದಲ್ಲಿ ಮುಸ್ಲಿಂ ಧರ್ಮಗುರುಗಳ ನಿಯೋಗ ಸಿಎಂ ಭೇಟಿ ಮಾಡಲಿದೆ. -ಮೌಲಾನ ಜಕಾವುಲ್ಲಾ ಮಿಲ್ಲಿ ಕೌನ್ಸಿಲ್ ಅಧ್ಯಕ್ಷರು
0 ಕಾಮೆಂಟ್‌ಗಳು