ತನ್ವೀರ್ ಸೇಠ್‍ಗೆ ತಪ್ಪಿದ ಸಚಿವ ಸ್ಥಾನ : ಎನ್‍ಆರ್ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭುಗಿಲೆದ್ದ ಆಕ್ರೋಶ: ಎಂ.ರಸೂಲ್ ನೇತೃತ್ವದಲ್ಲಿ ಪ್ರತಿಭಟನೆ
ಮೇ 27, 2023
ಮೈಸೂರು : ಸತತವಾಗಿ 6 ಬಾರಿ ಮೈಸೂರಿನ ಎನ್‍ಆರ್ ಕ್ಷೇತ್ರದಿಂದ ಜಯಗಳಿಸಿರುವ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್‍ಗೆ ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರಿ ಅಸಮಾಧಾನ ಭುಗಿಲೆದ್ದಿದ್ದು, ಕಾಂಗ್ರೆಸ್ ಮುಖಂಡ ಎಂ.ರಸೂಲ್ಗ್ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಬೆಳಿಗ್ಗೆ ಜಮಾಯಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ, ತನ್ವೀರ್ ಸೇಠ್ ಅಭಿಮಾನಿ ಬಳಗದ ಅಧ್ಯಕ್ಷ ಎಂ.ರಸೂಲ್ ಮಾತನಾಡಿ, ಶಾಸಕ ತನ್ವೀರ್ ಸೇಠ್ ಅವರು, ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಶಾಸಕರು. ಜತೆಗೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿಯಾಗಿದ್ದು, ಈ ಬಾರಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅವರು ಸಚಿವರಾಗಿದ್ದರು.ಈ ಬಾರಿಯೂ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ ಎಂದು ಕಿಡಿ ಕಾರಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರಲು ನಿರ್ಣಾಯಕ ಪಾತ್ರ ವಹಿಸಿರುವ ಮುಸ್ಲಿಂ ಸಮುದಾಯವನ್ನು ಸಂಪುಟದಲ್ಲಿ ಕಡೆಗಣಿಸಲಾಗಿದೆ. ಮೈಸೂರು ನರಸಿಂಹರಾಜ ಕ್ಷೇತ್ರದಲ್ಲಿ ಸತತವಾಗಿ 6 ಬಾರಿ ಜಯಗಳಿಸಿ ಡಬಲ್ ಹ್ಯಾಟ್ರಿಕ್ ಪಡೆದು ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿರುವ ತನ್ವೀರ್ ಸೇಠ್ ಅವರು ಪ್ರಾಮಾಣಿಕ, ನಿಷ್ಕಳಂಕ ರಾಜಕಾರಣಿ, ಅಭಿವೃದ್ಧಿಯ ಹರಿಕಾರ, ಜನಾನುರಾಗಿದ್ದು ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು ನಮಗೆ ಆಘಾತವಾಗಿದೆ ಎಂದರು. ಮಾಜಿ ಸಚಿವ ಅಜೀಜ್ ಸೇಠ್ ಅವರ ನಿಧನದ ನಂತರ ನಡೆದ 2002ರ ಉಪ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ತನ್ವೀರ್ ಸೇಠ್ ಅವರು ತಮ್ಮ ಪ್ರಥಮ ಜಯ ದಾಖಲಿಸಿದರು. ಬಳಿಕ ಇಂದಿನವರೆಗೂ ಸತತವಾಗಿ ಎನ್‍ಆರ್ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಸಚಿವರಾಗಿ ಹಾಗೂ ಮೈಸೂರು, ಕೊಡಗು ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ತಮ್ಮ ಎನ್‍ಆರ್ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇವರ ರಾಜಕೀಯ ಹಿರಿತನವನ್ನು ಪರಿಗಣಿಸಿ ಇವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು. ಅಲ್ಲದೇ ತನ್ವೀರ್ ಸೇಠ್ ಅವರು ರಾಜ್ಯದ ಹಿರಿಯ ಮುಸ್ಲಿಂ ಮುಖಂಡರು. ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತನ್ವೀರ್ ಸೇಠ್ ರಾಜ್ಯದಲ್ಲಿ ಮತ್ತು ವಿಶೇಷವಾಗಿ ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಶೇಕಡಾ 100 ರಷ್ಟು ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಕಾಂಗ್ರೆಸ್ ಪಕ್ಷದ ಕಟ್ಟಾಳು, ಜನನಾಯಕನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಅಗತ್ಯವಾಗಿದೆ. ತನ್ವೀರ್ ಅವರಿಗೆ ಸಚಿವ ಸ್ಥಾನ ನೀಡದಿರುವ ಕಾರಣ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದರು. ಪ್ರತಿಭಟನೆಗೂ ಮುನ್ನ ಕಾಂಗ್ರೆಸ್ ಮುಖಂಡ ಎಂ.ರಸೂಲ್ ಅವರು ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಪಾರ್ಪಣೆ ಸಲ್ಲಿಸಿದರು. ಬಳಿಕ ಪ್ರತಿಭಟನಾಕಾರರು ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಜರ್ ಪಾಷ, ನೂರುಲ್ಲಾ, ಅಫ್ರೋಜ್, ಸೈಯದ್ ಫಾರೂಖ್, ನಾಸೀರ್,ಅಜ್ಮಲ್ ರಹಮಾನ್ ಕೆ.ಆರ್., ಮೊಕ್ತಾರ್ ಪಾಷ ಮುಂತಾದವರು ಇದ್ದರು.
0 ಕಾಮೆಂಟ್‌ಗಳು