ʻಬಸವಮಾರ್ಗ’ಯೋಜನೆ ಈಡೇರಿಸಲು ಮನವಿ : ಶರಣರ ಬೇಡಿಕೆಗೆ ಸಿ.ಎಸ್.ಪುಟ್ಟರಾಜು ಸ್ಪಂದನೆ
ಮೇ 02, 2023
ಪಾಂಡವಪುರ
: ಜಿಲ್ಲೆಯ ಸಮಸ್ತ ಲಿಂಗಾಯತರ ಹಕ್ಕೊತ್ತಾಯವಾಗಿರುವ ‘ಬಸವಮಾರ್ಗ’ಯೋಜನೆಯನ್ನು ಅನುಷ್ಠಾನಗೊಳಿಸಲು
ಆಗ್ರಹಿಸಿ ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಬೆಟ್ಟಹಳ್ಳಿ
ಮಂಜುನಾಥ್ ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ
ಸಿ.ಎಸ್.ಪುಟ್ಟರಾಜು ಅವರಿಗೆ ಸಮುದಾಯದ ಪರವಾಗಿ ಮನವಿ ಸಲ್ಲಿಸಿದರು. ತಾಲ್ಲೂಕಿನ
ಎಂ.ಬೆಟ್ಟಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಂಜುನಾಥ್ ಅವರ ನಿವಾಸಕ್ಕೆ
ಭೇಟಿ ನೀಡಿದ್ದ ಪುಟ್ಟರಾಜು ಅವರಿಗೆ ಬಸವಮಾರ್ಗ ಯೋಜನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟ ಟ್ರಸ್ಟ್ ಕಾರ್ಯಾಧ್ಯಕ್ಷ
ಎಂ.ಶಿವಕುಮಾರ್, ಕಳೆದ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಸಮುದಾಯದ ಧಾರ್ಮಿಕ, ಶೈಕ್ಷಣಿಕ,
ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಯ ಏಳ್ಗೆಗೆ ಬೆಂಬಲವಾಗಿ ನಿಲ್ಲಬೇಕೆಂದು ಕೋರಿದರು. ಮಂಡ್ಯಜಿಲ್ಲಾಧಿಕಾರಿಗಳ
ಕಚೇರಿ ಮುಂದೆ ಶೀಘ್ರವೇ ವಿಶ್ವಗುರು ಬಸವಣ್ಣನವರ ಅಶ್ವರೂಢ ಪುತ್ಥಳಿ ಸ್ಥಾಪನೆ,ಜಿಲ್ಲೆಯ ೭ ತಾಲ್ಲೂಕುಗಳಲ್ಲಿ ಬಸವಭವನ ನಿರ್ಮಾಣ,ಸರ್ಕಾರಿ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ
ಬಸವಣ್ಣನವರ ಭಾವಚಿತ್ರ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪಾಂಡವಪುರ ಪಟ್ಟಣದ ಪ್ರಮುಖ ರಸ್ತೆ, ಉದ್ಯಾನವನ, ವೃತ್ತಗಳಿಗೆ
ಬಸವೇಶ್ವರರ ನಾಮಕರಣ,ಲಿಂಗಾಯತ ಸಮುದಾಯಕ್ಕೆ ಸ್ವತಂತ್ರಧರ್ಮ
ಮಾನ್ಯತೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬೆಂಬಲ,ಲಿಂಗಾಯತರಿಗೆ ಪ್ರತ್ಯೇಕ ಸ್ಮಶಾನ ಕಲ್ಪಿಸಬೇಕೆಂಬುದು
ಸೇರಿದಂತೆ ಹಲವು ಬೇಡಿಕೆಗಳನ್ನುಈಡೇರಿಸಬೇಕೆಂಬ ಬೇಡಿಕೆಗೆ
ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಮುಂಬರುವ ದಿನಗಳಲ್ಲಿ ಶರಣ ಸಂಸ್ಕೃತಿಯನ್ನು ಎತ್ತಿ ಹಿಡಿಯುವ
ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು. ಲಿಂಗಾಯತ
ಸಮುದಾಯದ ಮುಖಂಡರಾದ ಬೆಳ್ಳಾಳೆ ಮಲ್ಲೇಶ್, ಸಾಹಿತಿ
ದೇವಪ್ಪ, ಯೋಗೇಂದ್ರ, ಗ್ರಾಮ ಪಂಚಾಯತಿ ಸದಸ್ಯ ಕಾಂತರಾಜ್ ಮಹೇಶ್ ಮಾದಪ್ಪ ಶಂಭುಲಿಂಗಪ್ಪ ಸುಂದರಿ ರಾಜೇಶ
ಮಹದೇವಸ್ವಾಮಿ ಶಶಿಕುಮಾರ್ ತೋಂಟದಾರ್ಯ ಮತ್ತಿತರರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು