ಪಾಂಡವಪುರ : ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಜೆಡಿಎಸ್ ಅಭ್ಯರ್ಥಿ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ತಾಲೂಕಿನ ಕಾಮನಾಯಕನಹಳ್ಳಿ ಗ್ರಾಮದಲ್ಲಿ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು. ಬುಧವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಗ್ರಾಮಕ್ಕೆ ಆಗಮಿಸಿದ ಪುಟ್ಟರಾಜು ಅವರನ್ನು ಕಳಸ ಹೊತ್ತ ನೂರಾರು ಮಹಿಳೆಯರು ವಾದ್ಯಗಳೊಂದಿಗೆ ಗ್ರಾಮದೊಳಗೆ ಕರೆತಂದರು. ಈ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸಿದರೆ, ನೂರಾರು ಜನರು ಗ್ರಾಮದ ರಸ್ತೆಯುದ್ದಕ್ಕೂ ಹೂವಿನ ಮಳೆ ಹರಿಸಿ ಪುಟ್ಟರಾಜು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಪುಟ್ಟರಾಜು ಅವರು ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಈ ವೇಳೆ ಕ್ರೇನ್ ಮೂಲಕ ಪುಟ್ಟರಾಜು ಅವರಿಗೆ ಕಾಮನಾಯಕನಹಳ್ಳಿ ಗ್ರಾಮಸ್ಥರು ಮತ್ತು ಸಿಎಸ್‍ಪಿ ಬಾಯ್ಸ್ ವತಿಯಿಂದ ಬೃಹತ್ ಮೋಸಂಬಿ ಹಾರ ಹಾಕಲಾಯಿತು. ಇದೇ ಸಂದರ್ಭದಲ್ಲಿ ಪುಟ್ಟರಾಜು ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ವಳಗೆರೆ ದೇವರಹಳ್ಳಿ ಗ್ರಾಮದ ವಿನಿತ್, ಪರಮೇಶ್ ಮತ್ತಿತರರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಪುಟ್ಟರಾಜು ಅವರು ಮಾತನಾಡಿ, ಕೃಷಿ ಪ್ರಧಾನವಾದ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಏತ ನೀರಾವರಿ ಯೋಜನೆಗಳ ಮೂಲಕ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಲಾಗಿದೆ. ಕಾಮನಾಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ 700ಕ್ಕೂ ಹೆಚ್ಚು ಎಕರೆ ಜಮೀನುಗಳಿಗೆ ನೀರು ಒದಗಿಸಲು 10 ಕೋಟಿ ರೂ. ವೆಚ್ಚದಲ್ಲಿ ವಡಕೆಕಟ್ಟೆ ಕೆರೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಕಾಮನಾಯಕನಹಳ್ಳಿ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಈ ಚುನಾವಣೆಯನ್ನು ಅತಿ ಹೆಚ್ಚು ಮತಗಳಿಂದ ತಮ್ಮನ್ನು ಗೆಲ್ಲಿಸಬೇಕೆಂದು ಅವರು ಮತದಾರರಲ್ಲಿ ಕೋರಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಸೇರಿದಂತೆ ಸಿಎಸ್‍ಪಿ ಬಾಯ್ಸ್ ಯುವಕರು ಹಾಜರಿದ್ದರು.
0 ಕಾಮೆಂಟ್‌ಗಳು