ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಪರ ಮುಸ್ಲಿಂ ಮುಖಂಡರ ಪ್ರಚಾರ
ಮೇ 03, 2023
ಪಾಂಡವಪುರ : ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಪರ ತಾಲೂಕಿನ ಮುಸ್ಲಿಂ ಮುಖಂಡರು ಪ್ರಚಾರ ನಡೆಸಿದರು. ಪಟ್ಟಣದ ಮಹಾತ್ಮಾ ಗಾಂಧಿನಗರ, ತಾಲೂಕಿನ ಎಲೆಕೆರೆ, ಹರವು, ಅರಳಕುಪ್ಪೆ ಮುಂತಾದ ಕಡೆ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಇಬ್ರಾನ್ ಪಾಷ ಮಾತನಾಡಿ, ಶಾಸಕ ಸಿ.ಎಸ್.ಪುಟ್ಟರಾಜು ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ನಾವುಗಳು ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿದ್ದೇವೆ. ಎಲ್ಲೆಡೆ ಪುಟ್ಟರಾಜು ಅವರಿಗೆ ಅಪಾರವಾದ ಬೆಂಬಲ ವ್ಯಕ್ತವಾಗುತ್ತಿದೆ. ಮತದಾರರು ಪುಟ್ಟರಾಜು ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಬಾರಿ ಅತಿ ಹೆಚ್ಚು ಮತಗಳಿಂದ ಅವರನ್ನು ಗೆಲ್ಲಿಸಲಿದ್ದಾರೆ ಎಂದರು. ಜೆಡಿಎಸ್ ಯುವ ಮುಖಂ ಸಮಿಉಲ್ಲಾ ಮಾತನಾಡಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿನ ನೀರಾವರಿ ಯೋಜನೆಗಳು, ನೂರಾರು ಗ್ರಾಮಗಳಲ್ಲಿನ ಸಿಸಿ ರಸ್ತೆಗಳ ನಿರ್ಮಾಣ, ಹೆದ್ದಾರಿಗಳ ಉನ್ನತೀಕರಣ, ಹೊಸದಾಗಿ ಶಾಲಾ ಕಾಲೇಜು ಮಂಜೂರಾತಿ, ವಿದ್ಯುತ್ ಸಬ್ ಸ್ಟೇಷನ್‍ಗಳ ನಿರ್ಮಾಣ ಸೇರಿದಂತೆ ಕೆರೆ ಕಟ್ಟೆಗಳ ಅಭಿವೃದ್ಧಿಯನ್ನು ಮತದಾರರು ಮೆಚ್ಚಿ ಪುಟ್ಟರಾಜು ಅವರನ್ನು ಬೆಂಬಲಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಚಂದ್ರು, ಬಿ.ವೈ.ಬಾಬು, ಮುಮ್ತಾಜ್, ನಸ್ರುಲ್ಲಾ, ಮುನ್ನಾ, ಶೋಹೇಬ್, ವಸೀಂ, ಅತಾವುಲ್ಲಾ, ನಾಜೀಮ್ ಪಾಷ ಮುಂತಾದವರು ಇದ್ದರು.
0 ಕಾಮೆಂಟ್‌ಗಳು