ಪಿಎಸ್‍ಎಸ್‍ಕೆ ನಿವೃತ್ತ ಕಾರ್ಮಿಕರ ಬಾಕಿ ಹಣ 1.91 ಕೋಟಿ ರೂ. ಮಂಜೂರು ಮಾಡಿದ ಸರ್ಕಾರ

ಪಾಂಡವಪುರ : ಪಿಎಸ್‍ಎಸ್‍ಕೆ ನಿವೃತ್ತ ಕಾರ್ಮಿಕರಿಗೆ ಸರ್ಕಾರ ನೀಡಬೇಕಿದ್ದ 1.91 ಕೋಟಿ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಿದೆ. ಇದನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಸಹಕಾರ ಸಂಘಗಳ ನಿಬಂಧಕರಾದ ವಿಕ್ರಂರಾಜೇ ಅರಸ್ ಹೇಳಿದ್ದಾರೆ.
ಪಿಎಸ್‍ಎಸ್‍ಕೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 62 ಜನ ಕಾರ್ಮಿಕರು ಕಳೆದ ಮೂರ್ನಾಲ್ಕು ವರ್ಷದಿಂದ ನಿವೃತ್ತರಾಗಿದ್ದರೂ ಇವರಿಗೆ ನೀಡಬೇಕಿದ್ದ ನಿವೃತ್ತಿ ಹಣ ಮಂಜೂರಾಗಿರಲಿಲ್ಲ. ಈ ಬಗ್ಗೆ ಕಾರ್ಮಿಕರು ಕಳೆದ 120 ದಿನಗಳಿಂದ ಪಿಎಸ್‍ಎಸ್‍ಕೆ ಕಾರ್ಖಾನೆ ಎದುರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು. ನಿವೃತ್ತರಾದ ಕೆಲವು ನೌಕರರು ಮೃತಪಟ್ಟಿದ್ದು, ಇವರ ಕುಟುಂಬಗಳು ಸಂಕಷ್ಟಕ್ಕೆ ಈಡಾಗಿದ್ದವು. ಶಾಸಕ ಸಿ.ಎಸ್.ಪುಟ್ಟರಾಜು ನಿವೃತ್ತ ನೌಕರರಿಗೆ ನೀಡಬೇಕಿರುವ ಬಾಕಿ ಹಣವನ್ನು ಮಂಜೂರು ಮಾಡುವಂತೆ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.