ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಪ್ರವೇಶ ಶುಲ್ಕ ಭರಿಸಲು ಆದ್ಯತೆ : ಡಾ.ಹೆಚ್.ಸಿ.ಮಹದೇವಪ್ಪ
ಮೇ 29, 2023
ಮೈಸೂರು : ಬಿಜೆಪಿ ಸರ್ಕಾರದಲ್ಲಿ ಸ್ಥಗಿತಗೊಂಡಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳ ಸ್ಕಾಲರ್‍ಶಿಪ್ ಕೊಡಿಸುವುದು ಮತ್ತು ಕಾಲೇಜು ವಿದ್ಯಾರ್ಥಿಗಳ ಪ್ರವೇಶ ಶುಲ್ಕಗಳನ್ನು ಸರ್ಕಾರದಿಂದಲೇ ಪಾವತಿಸಿವ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳಸಭೆ ಕರೆದು ತುರ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು. ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿ ವೇತನ ಪಾವತಿಸಿಲ್ಲ. ಹಾಸ್ಟೇಲ್‍ಗಳಿಗೆ ಸಮರ್ಪಕ ಸೌಲಭ್ಯ ಒದಗಿಸಿಲ್ಲ. ಜತೆಗೆ ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಶಾಲಾ ಕಾಲೇಜು ಪ್ರವೇಶ ಶುಲ್ಕ ಪಾವತಿಸಿಲ್ಲ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಕಟ್ಟಲು ಗಡುವು ನೀಡಿದರೆ, ಸಮಾಜ ಕಲ್ಯಾಣ ಇಲಾಖೆ ಶುಲ್ಕ ನಾವು ಕೊಡುತ್ತೇವೆ ಪ್ರವೇಶ ನೀಡಿ ಎಂದು ಆದೇಶ ನೀಡಿರುತ್ತಾರೆ. ಈ ಆದೇಶಗಳಿಗೆ ಕಾಲೇಜು ಆಡಳಿತ ಮಂಡಳಿಗಳು ಯಾವುದೇ ರೀತಿಯ ಬೆಲೆ ನೀಡದ ಕಾರಣ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಈ ಕೆಲಸವನ್ನು ಮಾಡದ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆಮಾತನಾಡುತ್ತಾರೆ. ಇವರಿಗೆ ನಮ್ಮ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಕಿಡಿ ಕಾರಿದರು. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿರುವ ಭರವಸೆಗಳನ್ನು ಜಾರಿ ಮಾಡುತ್ತದೆ.ಇದರಲ್ಲಿ ಯಾವುದೇ ಅನುಮಾನ ಬೇಡ. ಬಿಜೆಪಿಯವರು ಜನರಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಜನರ ಮನಸ್ಸನ್ನು ಕಟ್ಟುವ ಕೆಲಸ ಮಾಡಿದರೆ, ಬಿಜೆಪಿಯವರು ಮನಸ್ಸು ಮುರಿಯುವ ಕೆಲಸ ಮಾಡುತ್ತಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ದೇಶದ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿಗಳು ಹೇಳಿದ್ದಾರೆ. ಈ ಮಾತು ಹೇಳಿ 9 ವರ್ಷ ಆಯ್ತು. ಇಲ್ಲಿಯ ತನಕ 18 ಕೋಟಿ ಉದ್ಯೋಗನೀಡಬೇಕಿತ್ತು. ಕೊಟ್ಟಿದ್ದಾರಾ? ತಲಾ 15ಲಕ್ಷ ಏನಾಯ್ತು? ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣ ಬಂತಾ? ರೈತರ ಆದಾಯ ದ್ವಿಗುಣ ಮಾ ಡುವುದಾಗಿ ಹೇಳಿದ್ದರು ಏನಾಯ್ತು? ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತ ವಿರೋಧಿ ಕಾನೂನುಗಳು ಜಾರಿಯಾಗಿವೆ. ನಾವೇನೂ ಬಿಜೆಪಿಯವರ ರೀತಿ ಸುಳ್ಳು ಆಶ್ವಾಸನೆ ನೀಡಿಲ್ಲ. ಏನು ಹೇಳಿದ್ದೆವೋ ಅದನ್ನು ಮಾಡಿಯೇ ತೀರುತ್ತೇವೆ ಎಂದರು. ಗ್ಯಾರಂಟಿಗಳ ಜಾರಿಗೆ ಕಾನೂನು, ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಇಲಾಖಾವಾರು ಅನುದಾನ ನೀಡಿಕೆ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿಯವರು ಸೋಲಿನ ಅಘಾತದಿಂದ ಹತಾಶರಾಗಿ ಈಗ ಡೆಡ್‍ಲೈನ್ ನೀಡಲು ಮುಂದಾಗಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿ ಕಾರಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳು, ಕಾರ್ಯಕರ್ತರು ಡಾ.ಹೆಚ್.ಸಿ.ಮಹದೇವಪ್ಪ ಅವರನ್ನು ಸನ್ಮಾನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸೋಮಶೇಖರ್, ಮುಖಂಡರಾದ ಎಂ.ಲಕ್ಷ್ಮಣ್, ಬಿ.ಜೆ.ವಿಜಯಕುಮಾರ್, ಮೂರ್ತಿ, ಶಿವಣ್ಣ, ಬಿಎಂ ರಾಮು ಮುಂತಾದವರು ಇದ್ದರು.
0 ಕಾಮೆಂಟ್‌ಗಳು