ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಜನಪರ ಆಡಳಿತ

ಪಾಂಡವಪುರ ಪಟ್ಟಣದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‍ಪುಟ್ಟಣ್ಣಯ್ಯ ಅವರ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೋಡ್ ಶೋ ನಡೆಸಿದರು.

ಪಾಂಡವಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಜನಪರ, ರೈತಪರವಾದ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಪಟ್ಟಣದಲ್ಲಿ ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‍ಪುಟ್ಟಣ್ಣಯ್ಯ ಅವರ ಪರವಾಗಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರಕಾರದ ವಿರುದ್ದ ಹೋರಾಟ ನಡೆಸಿದ್ದೇವೆ. ಮೇಕೆದಾಟಿಗಾಗಿ ಹೋರಾಟ ಮಾಡಿದ್ದೆ, ಎತ್ತಿನಹೊಳೆ ಕಾರ್ಯಕ್ರಮದ ಬಗ್ಗೆ ಹೋರಾಟ ನಡೆಸಿದೆ. ಕುಮಾರಸ್ವಾಮಿ ಅವರು ಮೇಕೆದಾಟು, ಎತ್ತಿನಹೊಳೆ ಹೋರಾಟ ಬಗ್ಗೆ ಟೀಕೆ ಮಾಡಿದರು. ಬಿಜೆಪಿ ಅವರು 7 ಲಕ್ಷ ಮತಗಳ ಅಂತರದಿಂದ ಗೆದ್ದ ಇಂದಿರಾ ಗಾಂಧಿ ಮೊಮ್ಮಗ ರಾಹುಲ್‍ಗಾಂಧಿ ಅವರನ್ನು ವಜಾಗೊಳಿಸಿದರು ಎಂದು ಕಿಡಿಕಾರಿದರು.
ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಎಚ್.ಡಿ.ದೇವೇಗೌಡ ಅವರನ್ನು ಪ್ರಧಾನ ಮಂತ್ರಿ ಮಾಡಿದ್ದೇವೆ. ಹಾಗಾಗಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಅವಕಾಶವಿದೆ. ಕ್ಷೇತ್ರದ ಮಹಾಜನತೆ ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‍ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸುವ ಮೂಲಕ ನನ್ನ ಕೈಬಲಪಡಿಸಬೇಕು. ರೈತಸಂಘ-ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ, ಒಬ್ಬೊಬ್ಬ ಕಾರ್ಯಕರ್ತರು ಐದು ಮತಗಳನ್ನು ಹಾಕಿಸಬೇಕು ಎಂದು ತಿಳಿಸಿದರು.
ಅಭ್ಯರ್ಥಿ ದರ್ಶನ್‍ಪುಟ್ಟಣ್ಣಯ್ಯ ಮಾತನಾಡಿ, ನಾನು ಮೇಲುಕೋಟೆ ಕ್ಷೇತ್ರವನ್ನು ಬಿಟ್ಟು ಎಲ್ಲೋ ಹೋಗೋದಿಲ್ಲ. ಕ್ಷೇತ್ರದಲ್ಲಿಯೇ ಇದ್ದು ಜನರ ಸೇವೆ ಮಾಡುತ್ತೇನೆ. ಕ್ಷೇತ್ರದಲ್ಲಿ ಬುದ್ದಿವಂತಿಕೆಯಿಂದ ಚುನಾವಣೆ ನಡೆಸೋಣ ಎಂದರು.
ಇದೇ ವೇಳೆ ಮನ್‍ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಬಿ.ರಾಮು, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಮುಖಂಡ ಬಿ.ರೇವಣ್ಣ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ನೀತಿ ಸಂಹಿತೆ ಉಲ್ಲಂಘನೆ?

ಪಾಂಡವಪುರ : ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಪರವಾಗಿ ಮತಯಾಚನೆ ಮಾಡಲು ಆಗಮಿಸಿದ್ದ ಡಿ.ಕೆ.ಶಿವಕುಮಾರ್ ಚುನಾವಣಾ ಆಯೋಗದಿಂದ ಪಡೆದುಕೊಂಡಿದ್ದ ಸಮಯದ ಅವಧಿಯನ್ನು ಮೀರಿ ರೋಡ್ ಶೋ ನಡೆಸುವ ಮೂಲಕ ಚುನಾವಣಾ ಆಯೋಗದ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೋಡ್ ಶೋಗಾಗಿ ಚುನಾವಣಾ ಆಯೋಗದಿಂದ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮಾತ್ರ ಅನುಮತಿ ಪಡೆದುಕೊಂಡಿದ್ದರು. ಆದರೆ, ಡಿ.ಕೆ.ಶಿವಕುಮಾರ್ ಅವರು ಪಾಂಡವಪುರ ಪಟ್ಟಣಕ್ಕೆ ಬರುವಷ್ಟರಲ್ಲಿ ರಾತ್ರಿ 7.20 ನಿಮಿಷವಾಗಿತ್ತು. ಬಳಿಕ ಪಟ್ಟಣದಲ್ಲಿ 20 ನಿಮಿಷಕ್ಕೂ ಅಧಿಕ ಕಾಲ ಕಾರ್ಯಕರ್ತರು ಕುರಿತು ಡಿಕೆಶಿ ಭಾಷಣ ಪ್ರಾರಂಭಿಸಿ 7.46 ಭಾಷಣ ಮುಗಿಸಿದರು. ಈ ಮೂಲಕ ಚುನಾವಣಾ ಆಯೋಗದ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಕುರಿತು ಚುನಾವಣಾಧಿಕಾರಿಗಳು ದೂರು ದಾಖಲಿಸುವ ಸಾಧ್ಯತೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು