ತ್ರಿಕೋನ ಸ್ಪರ್ಧೆಗೆ ಹನೂರು ಕ್ಷೇತ್ರ ಸಜ್ಜು : ನರೇಂದ್ರ, ಮಂಜುನಾಥ್ ಸ್ಪರ್ಧೆಗೆ ರೆಡಿ, ಬಿಜೆಪಿ ಟಿಕೆಟ್‍ಗಾಗಿ ನಾಲ್ವರ ಪೈಪೋಟಿ
ಫೆಬ್ರವರಿ 09, 2023
ವರದಿ : ಶಾರುಕ್ ಖಾನ್ ಹನೂರು ಹನೂರು : ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನಿಸಿದ ಹನೂರು ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ. ಕಾಂಗ್ರೆಸ್ ಕೆಡವಲು ಜೆಡಿಎಸ್ ವ್ಯವಸ್ಥಿತವಾಗಿ ಪ್ರಚಾರದಲ್ಲಿ ತೊಡಗಿದ್ದು, ಬಿಜೆಪಿಯಲ್ಲಿ ಟಿಕೆಟ್ ಯಾರಿಗೆ ಎನ್ನುವ ಗೊಂದಲ ಸೃಷ್ಟಿಯಾ ಗಿದೆ. ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಆರ್.ನರೇಂದ್ರ ಅವರಿಗೆ ಟಿಕೆಟ್ ಗ್ಯಾರಂಟಿಯಾಗಿದ್ದು, ಎಲ್. ನಾಗೇಂದ್ರ ಎಂಬವರೂ ಕೂಡ ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದರೂ ನರೇಂದ್ರ ಅವರಿಗೆ ಟಿಕೆಟ್ ಖಚಿತ ಎನ್ನಲಾಗಿದೆ. ಜೆಡಿಎಸ್ ಕೂಡ ತನ್ನ ಅಭ್ಯರ್ಥಿ ಮಂಜುನಾಥ್ ಎಂದು ಘೋಷಿಸಿದೆ. ಆದರೇ, ಆಡಳಿತರೂಢ ಬಿಜೆಪಿಯಲ್ಲಿ ಟಿಕೆಟ್ ಯಾರಿಗೆ ಎನ್ನುವುದು ಇನ್ನೂ ತೀರ್ಮಾನವಾಗದ ಕಾರಣ ಮುಖಂಡರು ಗೊಂದಲದಲ್ಲಿದ್ದು, ಆಕಾಂಕ್ಷಿಗಳು ವೈಯುಕ್ತಿಕವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ದಿವಂಗತರಾದ ಜಿ.ವಿ.ಗೌಡ, ಹುಚ್ಚಪ್ಪ. ನಾಗಪ್ಪ, ರಾಜೂಗೌಡರ ಕಾಲದ ತತ್ವ, ಸಿದ್ಧಾಂತ, ಪಕ್ಷ ನಿಷ್ಠೆ ರಾಜಕೀಯ ಈಗಿಲ್ಲ. ಈಗೇನಿದ್ದರೂ ಸೇವೆಯ ನೆಪದಲ್ಲಿ ಜನಾಕರ್ಷಣೆ ಮಾಡಿಕೊಂಡು ರಾಜಕೀಯ ಮಾಡುವುದು ಎಲ್ಲೆಡೆ ನಡೆಯುವಂತೆ ಹನೂರಿನಲ್ಲೂ ಸಮಾಜ ಸೇವಕರ ಮುಖವಾಡ ಹೊತ್ತ ವಿವಿಧ ಪಕ್ಷಗಳ ಮುಖಂಡರು ಒಂದಷ್ಟು ಹಣ ಚೆಲ್ಲಿ ಪ್ರಚಾರ ಪಡೆದು ಗುಂಪುಗಳನ್ನು ಕಟ್ಟಿಕೊಂಡು ನಾಯಕರೆಂಬಂತೆ ಬಿಂಬಿಸಿ ಕ್ಷೇತ್ರದಲ್ಲಿ ಓಡಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆರ್.ನರೇಂದ್ರ ಸಧ್ಯಕ್ಕೆ ಗೆಲ್ಲುವ ಫೆವರೇಟ್ ಕುದುರೆ ಎನಿಸಿದರೂ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಜೆಡಿಎಸ್‍ನ ಮಂಜುನಾಥ್ ಅವರನ್ನು ಕಡೆಗಣಿಸುವಂತಿಲ್ಲ. ಇನ್ನು ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರ ಮಗ ಡಾ.ಪ್ರೀತನ್ ನಾಗಪ್ಪ 2018ರಲ್ಲಿ ಬಿಜೆಪಿಯಿಂದ ಸೋತು ಈಗ ಮತ್ತೊಂದು ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಇವರ ಜತೆಗೆ ಬಿಜೆಪಿ ಟಿಕೆಟ್‍ಗಾಗಿ ಬಿ.ವೆಂಕಟೇಶ್, ಡಾ.ದತ್ತೇಶ್ ಕುಮಾರ್ ಹಾಗೂ ನಿಶಾಂತ್ ನಡುವೆ ಪೈಪೋಟಿ ಇದೆ. ಇವರುಗಳ ಪೈಕಿ ಟಿಕೆಟ್ ವಂಚಿತಗರು ಯಾರಿಗೆ ತಮ್ಮ ಬೆಂಬಲ ನೀಡುತ್ತಾರೆ ಎನ್ನುವುದೂ ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಈ ನಡುವೆ ಬಿಎಸ್‍ಪಿ, ಆಮ್ ಆದ್ಮಿ, ಜೆಡಿಎಯು ಜತೆಗೆ ಒಂದಿಬ್ಬರು ಪಕ್ಷೇತರ ಅಭ್ಯರ್ಥಿಗಳೂ 2023ರ ಚುನಾವಣಾ ಕಣದಲ್ಲಿ ಉಳಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಕೆ.ಗುಂಡಾಪುರ ಗ್ರಾಮದ ಮುಜಮಿಲ್‍ಪಾಶ ಹಾಗೂ ಪೊನ್ನಾಚಿ ಗ್ರಾಮದ ಸ್ನೇಹಜೀವಿ ರಾಜು, ಮತ್ತಿಪುರದ ನಾಗೇಂದ್ರ ಮತ್ತು ಗಂಗಾಧರ್ ಚುನಾವಣಾ ಕಣದಲಿಳಿಯಲು ತುದಿಗಾಲ ಮೇಲೆ ನಿಂತಿದ್ದಾರೆ. ಒಟ್ಟಾರೆ ಹನೂರು ಕ್ಷೇತ್ರದಲ್ಲಿ ರಾಜಕೀಯ ರಂಗೇರಿದ್ದು ಎಲ್ಲಾ ಪಕ್ಷಗಳಲ್ಲೂ ಟಿಕೆಟ್ ಘೋಷಣೆಯಾದರೆ ಸ್ಪಷ್ಟ ಚಿತ್ರಣ ದೊರಕಲಿದೆ.
0 ಕಾಮೆಂಟ್‌ಗಳು