ತಿ.ನರಸೀಪುರ : ಒಂದೇ ಬೋನಿಗೆ ಬಿದ್ದ ಜೋಡಿ ಚಿರತೆಗಳು

ರೇವಣ್ಣ, ತಿ.ನರಸೀಪುರ
ತಿ. ನರಸೀಪುರ: ನಾಲ್ಕು ಜನರನ್ನು ಬಲಿ ಪಡೆದು ತಾಲೂಕಿನ ಜನತೆಯನ್ನು ತಲ್ಲಣಗೊಳಿಸಿದ್ದ ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮ ಯಶಸ್ವಿಯಾಗಿದ್ದು, ಗುರುವಾರ ರಾತ್ರಿ
ಒಂದೇ ಬೋನಿನಲ್ಲಿ ಜೋಡಿ ಚಿರೆತೆಗಳು ಸೆರೆಯಾದ ಅಪರೂಪದ ಪ್ರಸಂಗ ನಡೆದಿದೆ.
ತಾಲೂಕಿನ ಮುಸುವಿನ ಕೊಪ್ಪಲು ಗ್ರಾಮದ ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಇರಿಸಿದ್ದ ಕೊಟ್ಟಿಗೆಯಾಕಾರದ ಬೋನಿನಲ್ಲಿ ಎರಡು ಚಿರತೆಗಳು ಸೆರೆಯಾಗಿ ಜನ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸೆರೆಯಾದ ಚಿರತೆಗಳಿಗೆ ಅರವಳಿಕ್ಕೆ ಚುಚ್ಚುಮದ್ದು ನೀಡಿ ನಂತರ ಪ್ರತ್ಯೇಕ ಬೋನುಗಳಲ್ಲಿ ಸ್ಥಳಾಂತರಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ತಾಲೂಕಿನಲ್ಲಿ ಚಿರತೆ ದಾಳಿಯಿಂದ ನಾಲ್ಕು ಜನ ಮೃತಪಟ್ಟಿದ್ದರು. ಇದರಿಂದ ತಾಲ್ಲೂಕಿನ ಜನ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆಯನ್ನೂ ನಡೆಸಿದ್ದರು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಟಾಸ್ಕ್‌ಫೋರ್ಸ್‌ ರಚಿಸಿ ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ೧೮ ರಿಂದ ೨೦ ಚಿರತೆಗಳ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ್ದು ಫಲ ನೀಡುತ್ತಿದೆ.
ಮುಸುವಿನ ಕೊಪ್ಪಲು ಗ್ರಾಮದಲ್ಲಿ ಇರಿಸಿದ್ದ ಬೋನು ವಿಶೇಷವಾಗಿ ಕೊಟ್ಟಿಗೆ ಆಕಾರದಲ್ಲಿ ತಯಾರು ಮಾಡಲಾಗಿತ್ತು. ಜತೆಗೆ ಒಂದು ಹಸುವನ್ನು ಸಹ ಇಲ್ಲಿ ಕಟ್ಟಲಾಗಿತ್ತು. ದೊಡ್ಡ ಮಟ್ಟದಲ್ಲಿ ಬೋನು ಇದ್ದುದ್ದರಿಂದ ಒಮ್ಮೆಗೆ ಎರಡು ಚಿರತೆಗಳು ಸೆರೆಯಾಗಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.
ಜೋಡಿ ಚಿರತೆ ನೋಡಲು ನೂರಾರು ಜನರು ಜಮಾಯಿಸಿದ್ದರು, ಮುಂಜಾಗ್ರತಾ ಕ್ರಮವಾಗಿ ತಿ.ನರಸೀಪುರ ಠಾಣೆಯ ಪಿಎಸ್ಐ ತಿರುಮಲ್ಲೇಶ್ ಸೂಕ್ತ ಬಂದೋಬಸ್ತ್‌ ಮಾಡಿದ್ದರು.
ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಾದ ನದೀಮ್. ಲಕ್ಷ್ಮಿಕಾಂತ್, ಮಂಜುನಾಥ್, ನಾಗರಾಜು ಮುಂತಾದವರು ಇದ್ದರು. 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು