ಪ್ರಾಂಕ್ ಪೇ ಅಪ್ಲಿಕೇಷನ್ ಉಪಯೋಗಿಸಿ ಚಿನ್ನದ ಅಂಗಡಿ ಮಾಲೀಕನಿಗೆ ಮೋಸ : ಮೂವರ ಬಂಧನ, ಚಿನ್ನ, ನಗದು ವಶ

ಮೈಸೂರು : ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿರುವ ಪ್ರಾಂಕ್ ಪೇ ಮೊಬೈಲ್ ಅಪ್ಲಿಕೇಷನ್ ಮೂಲಕ ಚಿನ್ನದ ಅಂಗಡಿ ಮಾಲೀಕನಿಗೆ ಮೋಸ ಮಾಡಿದ್ದ ಮೂವರು ಆರೋಪಿಗಳನ್ನು ಸೆನ್ ಕ್ರೈಂ ಪೊಲೀಸರು ಬಂಧಿಸಿ ನಗದು ಮತ್ತು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ನಗರದ ಚಿನ್ನದ ಅಂಗಡಿಯೊಂದಕ್ಕೆ ತೆರಳಿ, 62,500 ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಹಣವನ್ನು ಫೋನ್ ಪೇ ಮಾಡುವುದಾಗಿ ಹೇಳಿ ನಕಲಿ ಅಪ್ಲಿಕೇಷನ್ ಮೂಲಕ ಹಣ ಪಾವತಿಯಾದ ಬಗ್ಗೆ ಸ್ಕ್ರೀನ್ ಶಾಟ್ ತೋರಿಸಿ ಪರಾರಿಯಾಗಿದ್ದರು. ಅನಂತರ ಅಂಗಡಿ ಮಾಲೀಕ ತನ್ನ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಆಗಿಲ್ಲದ ಕಾರಣ ತಾನು ಮೋಸ ಹೋಗಿದ್ದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಸೆನ್ ಕ್ರೈಂ ಪೊಲೀಸರು,  ಮೂವರು ಆರೋಪಿಗಳನ್ನು ಬಂಧಿಸಿ 2 ಮೋಬೈಲ್, 12 ಗ್ರಾಂ ಚಿನ್ನದಂತಿರುವ ಸರ, 4,500 ನಗದು ಹಣ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ವಿವಿಧ ಕಡೆ ಇದೇ ರೀತಿ ಸುಮಾರು 1,26,500 ರೂ. ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಡಿಸಿಪಿ ಎಂ.ಮುತ್ತುರಾಜು ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಎಂ.ಎನ್, ಶಶಿಧರ್ ನೇತೃತ್ವದಲ್ಲಿ ಸೆನ್ ಕ್ರೈಂ ಇನ್ಸ್‍ಪೆಕ್ಟರ್ ಎನ್.ಜಯಕುಮಾರ್, ಪಿಎಸ್‍ಐ ಎನ್.ಅನಿಲ್ ಕುಮಾರ್, ಎಂ.ಎಲ್, ಸಿದ್ದೇಶ್, ಎಎಸ್‍ಐ ಸುಭಾಷ್ ಚಂದ್ರ ಹಾಗೂ ಸಿಬ್ಬಂದಿಗಳಾದ ನಾಗೇಂದ್ರ, ಶ್ರೀನಿವಾಸ್. ಕೆ.ಎಸ್, ಮಧು.ವಿ.ಎ, ಭವಾನಿ.ಕೆ.ಎಲ್ ಮತ್ತು
ಕುಮಾರ್.ಪಿ ಆರೋಪಿಗಳನ್ನು ಪತ್ತೆ ಮಾಡಿದ್ದು, ಈ ಕಾರ್ಯವನ್ನು ಪೊಲೀಸ್ ಆಯುಕ್ತ ಬಿ.ರಮೇಶ್ ಶ್ಲಾಘಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು