ಸಾಂಬಶಿವ ಪ್ರಹಸನ ನಾಟಕ ತಿರುಚಿ ಅಸಹ್ಯ ಪ್ರದರ್ಶನ ಆರೋಪ: ಪೊಲೀಸ್ ಆಯುಕ್ತರಿಗೆ ಡಾ.ಚಂದ್ರಶೇಖರ ಕಂಬಾರ ದೂರು
ಜನವರಿ 02, 2023
ಮೈಸೂರು: ಜನವರಿ 2 ರಂದು ಮೈಸೂರಿನ ರಂಗಾಯಣದಲ್ಲಿ ನನ್ನ ಸಾಂಬಶಿವ ಪ್ರಹಸನ ನಾಟಕವನ್ನು ನನ್ನ ಅನುಮತಿ ಇಲ್ಲದೆ ಅಸಹ್ಯಕರವಾಗಿ ಪ್ರದರ್ಶಿಸಿದ್ದು, ಪ್ರದರ್ಶನ ಮಾಡಿದವರು ಮತ್ತು ಇದಕ್ಕೆ ಕಾರಣರಾದ ಎಲ್ಲರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಇ ಮೇಲ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಖುದ್ಧು ದೂರವಾಣಿ ಮೂಲಕ ಮಾತನಾಡಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ ಸಾಂಬಶಿವ ಪ್ರಹಸನವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬ ವಿಷಾಧವಾಗಿದೆ. ಮೊದಲನೆಯದಾಗಿ ನನ್ನ ನಾಟಕ ಪ್ರದರ್ಶಿಸುವುದಕ್ಕೆ ನನ್ನ ಅನುಮತಿ ಕೇಳಲೇ ಬೇಕಾಗಿತ್ತು. ಆದರೆ ಇವರು ಕೇಳಿಲ್ಲ. ರಂಗಾಯಣವಾದರೂ ನನ್ನ ಅನುಮತಿ ಇಲ್ಲದ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ವಿಷಾಧಕರ ಎಂದು ತಿಳಿಸಿದ್ದಾರೆ. ಎರಡನೆಯದಾಗಿ ನನ್ನ ಯಾವುದೇ ನಾಟಕಗಳಲ್ಲಿ ವ್ಯಕ್ತಿಗತ ನಿಂದನೆ ಇರುವುದು ಸಾಧ್ಯವಿಲ್ಲ. ಅನುಮತಿ ಇಲ್ಲದೆ ನಾಟಕವನ್ನು ಪ್ರದರ್ಶಿಸಿದ್ದಕ್ಕೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೂ ಮತ್ತು ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೂ ಹಾಗೂ ಈ ಅಹಿತಕರ ವಾತಾವರಣಕ್ಕೆ ಕಾರಣರಾದ ಸಂಬಂಧಪಟ್ಟ ಎಲ್ಲರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿರುವ ಮೈಸೂರು ನಗರ ಪೊಲೀಸ್ ಆಯುಕ್ತರು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
0 ಕಾಮೆಂಟ್‌ಗಳು