ಬಿಜೆಪಿ ಎಸ್‍ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್‍ಸಿಂಗ್ ಆರ್ಯಗೆ ಬೈಕ್‍ರ್ಯಾಲಿ ಮೂಲಕ ಅದ್ಧೂರಿ ಸ್ವಾಗತ
ಮೈಸೂರು : ದಲಿತ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ಯಾಂಟ್ರೋ ರವಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಮೈಸೂರಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಬಿಜೆಪಿ ಎಸ್‍ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಲಾಲ್‍ಸಿಂಗ್ ಆರ್ಯ ಅವರನ್ನು ಸ್ವಾಗತಿಸಿ, ಪುರಭವನದ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು.
ಸ್ಯಾಂಟ್ರೋ ರವಿ ಯಾರೆಂದು ನನಗೆ ಗೊತ್ತಿಲ್ಲ. ಅವರ ವಿರುದ್ಧದ ಆರೋಪ ಏನೆಂದು ತಿಳಿದಿಲ್ಲ. ಆದಾಗ್ಯೂ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವ ಕಾರಣಕ್ಕೆ ದೂರು ದಾಖಲಾಗಿದ್ದರೆ, ಅವರ ವಿರುದ್ಧ ಕ್ರಮವಾಗಬೇಕು, ನಮ್ಮ ಪಕ್ಷ ಇಂತಹದ್ದನ್ನೆಲ್ಲಾ ಸಹಿಸಲ್ಲ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಈ ಬಗ್ಗೆ ಪಕ್ಷದ ಹಿರಿಯರ ಗಮನಕ್ಕೆ ತರಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಯಾಂಟ್ರೋ ರವಿ ವಿರುದ್ಧ ಆರೋಪ ಮಾಡುತ್ತಾ ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 17 ಶಾಸಕರು ಮುಂಬೈನಲ್ಲಿ ನೆಲಸಿದ್ದ ವೇಳೆ ಅವರ ಎಲ್ಲಾ ಅಗತ್ಯಗಳನ್ನು ಪೂರೈಸಿದ್ದು ಇದೇ ಸ್ಯಾಂಟ್ರೋ ರವಿ ಎಂಬ ಅಪಾದನೆ ಕುರಿತು ಮಾತನಾಡಿದ ನಾರಾಯಣಸ್ವಾಮಿ, ಕುಮಾರಸ್ವಾಮಿ ಅವರ ಯಾವ ಮಾತನ್ನು ನಾನು ನಂಬಲಿ ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಈ ಬಗ್ಗೆ ನನಗೆ ಹೆಚ್ಚಾಗಿ ತಿಳಿದಿಲ್ಲ. ಪಕ್ಷದ ಹಿರಿಯರ ಗಮನಕ್ಕೆ ತರುತ್ತೇನೆ ಎಂದರು.
ಮೂರು ದಿನಗಳ ಕಾಲ ಮೈಸೂರಿನಲ್ಲಿ ಬಿಜೆಪಿ ಎಸ್‍ಸಿ ಮೋರ್ಚಾ ರಾಷ್ಟ್ರೀಯ ಕಾರ್ಯುಕಾರಿಣಿ ನಡೆಯಲಿದ್ದು, ನಾಳೆ ಬೆಳಿಗ್ಗೆಯಿಂದಲೇ 50 ತಂಡಗಳಲ್ಲಿ ನಮ್ಮ ಕಾರ್ಯಕರ್ತರು ದಲಿತ ಸಮುದಾಯ ಹೆಚ್ಚಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಮುದಾಯದ ಸಮಸ್ಯೆ ಕುರಿತು ಸಂವಾದ ನಡೆಸುತ್ತಾರೆ. ಸಂಜೆ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದರು.
ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕಾರಣಿ ಉದ್ಘಾಟನೆ ಮಾಡಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್, ಕಟೀಲ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಾಗವಹಿಸಲಿದ್ದಾರೆ ಎಂದರು.
ಇದಕ್ಕೂ ಮುನ್ನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ
ಬಿಜೆಪಿ ರಾಷ್ಟ್ರೀಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಲಾಲ್‍ಸಿಂಗ್ ಆರ್ಯ ಅವರನ್ನು ಬಿಜೆಪಿ ಕಾರ್ಯಕರ್ತರು ಗಣಪತಿ ಸಚ್ಚಿದಾನಂದ ಆಶ್ರಮದಿಂದ ಪುರಭವನದ ಅಂಬೇಡ್ಕರ್ ಪ್ರತಿಮೆ ತನಕ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿ ಕರೆತಂದರು.
ಹೆಲ್ಮೆಟ್ ಧರಿಸದೆ ಬೈಕ್ ರ್ಯಾಲಿ :
ಮೈಸೂರಿನಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರ ವಿರುದ್ಧ ಸಮರ ಸಾರಿರುವ ಟ್ರಾಫಿಕ್ ಪೊಲೀಸರು, ತಮ್ಮ ಕಟ್ಟುನಿಟ್ಟಿನ ತಪಾಸಣೆಯಿಂದ ಸಾಕಷ್ಟು ಅಪಘಾತಗಳ ನಿಯಂತ್ರಣ ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ತಡೆಗಟ್ಟಿದ್ದರು. ಆದರೆ, ಇಂದು ನಡೆದ ಬೈಕ್ ರ್ಯಾಲಿಯಲ್ಲಿ ಯಾರೋಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಸುಮಾರು 500ಕ್ಕೂ ಹೆಚ್ಚು ಬೈಕ್‍ಗಳಲ್ಲಿ ರ್ಯಾಲಿ ಮೂಲಕ ಬಂದ ವಾಹನ ಸವಾರರನ್ನು ಟ್ರಾಫಿಕ್ ಪೊಲೀಸರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಇದರಿಂದ ಸಾರ್ವಜನಿಕರು ಕುಪಿತಗೊಂಡು ನಮಗೊಂಡು ನ್ಯಾಯ, ಇವರಿಗೊಂದು ನ್ಯಾಯವೇ ಎಂದು ಬೇಸರ ವ್ಯಕ್ತಪಡಿಸಿದರು.
0 ಕಾಮೆಂಟ್‌ಗಳು