ಪೋಷಕರನ್ನು ಕಡೆಗಣಿಸಬಾರದು : ಆರ್.ಮಾಲಿನಿ ಸಲಹೆ, ಹಿರಿಯರಿಗೆ ಗುರುತಿನ ಚೀಟಿ ವಿತರಣೆ
ಜನವರಿ 12, 2023
ಮೈಸೂರು : ತಮ್ಮ ವೃದ್ಧ ತಂದೆ ತಾಯಿಯ ಪಾಲನೆ-ಪೋಷಣೆ ಮಾಡುವುದು ಮಕ್ಕಳ ಕರ್ತವ್ಯ ಹಾಗೂ ಅತ್ಯಂತ ಪುಣ್ಯದ ಕೆಲಸವಾಗಿದ್ದು, ಪೋಷಕರನ್ನು ಕಡೆಗಣಿಸಿದರೆ ಜೈಲುವಾಸವನ್ನೂ ಸಹ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಮಾಲಿನಿ ಹೇಳಿದರು. ನಗರದ ರಿಂಗ್ ರಸ್ತೆಯಲ್ಲಿರುವ ಹಂಚ್ಯಾ ಸಾತಗಲ್ಲಿ ಬಿ ವಲಯದ ಹಂಸವಾಣಿ ಕನ್ನಡ ಬಳಗ ಮತ್ತು ಹಂಸವಾಣಿ ಹಿರಿಯ ನಾಗರಿಕರ ಹಿತರಕ್ಷಣಾ ವೇದಿಕೆ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ಗುರುತಿನ ಚೀಟಿಯನ್ನು ವಿತರಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007 ರ ಅನ್ವಯ ಯಾವುದೇ ಮಕ್ಕಳು ತಮ್ಮ ವೃದ್ಧ ತಂದೆ ತಾಯಿಯನ್ನು ಆರೈಕೆ ಮಾಡಲು ವಿಫಲರಾದರೆ, ಪೋಷಕರು ಇಚ್ಛಿಸಿದ್ದಲ್ಲಿ ಅವರಿಂದ ಪಡೆದ ಆಸ್ತಿಯನ್ನು ಮತ್ತೆ ವಾಪಸ್ ಮಾಡಬೇಕಾಗುತ್ತದೆ. ಅಲ್ಲದೇ, ಮೂರು ತಿಂಗಳ ಜೈಲು ವಾಸವನ್ನೂ ಸಹ ಅನುಭವಿಸಬೇಕಾಗುತ್ತದೆ. ಪೋಷಕರನ್ನು ನೋಡಿಕೊಳ್ಳುವುದು ಪುಣ್ಯದ ಕೆಲಸ, ಒಂದು ದಿನ ನಾವೂ ಸಹ ವೃದ್ಧರಾಗುತ್ತೇವೆ ಎಂಬುದನ್ನು ನೆನಪಿಟ್ಟುಕೊಂಡು ಹಿರಿಯ ನಾಗರಿಕರ ಆರೈಕೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಳಘಾದ ಕಾಂತರಾಜ್, ನಟರಾಜ್, ರಂಗರಾಜ್, ನಾಗಸುಂದರ್, ರಾಘವೇಂದ್ರ, ಪ್ರವೀಣ್ ಲಾಡ್, ಅರುಣ್ ಮತ್ತು ಉಭಯ ಬಳಗದ ಎಲ್ಲಾ ಸದಸ್ಯರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು