ತಲೆ ಮರೆಸಿಕೊಂಡಿರುವ ಕೈದಿ ಕೋತಿ ಸೋಮ ಪತ್ತೆಗೆ 50 ಸಾವಿರ ಬಹುಮಾನ ಘೋಷಿಸಿದ ಪೊಲೀಸ್ ಇಲಾಖೆ

ಮೈಸೂರು : ಪೆರೋಲ್ ರಜೆ ಮೇಲೆ ತೆರಳಿ ತಲೆ ಮರೆಸಿಕೊಂಡಿರುವ  ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿ ಸೋಮ ಅಲಿಯಾಸ್ ಕೋತಿ ಸೋಮನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ 50 ಸಾವಿರ ರೂ. ಬಹುಮಾನ ಘೋಷಿಸಿದೆ. 
ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು, ಪಾಲಹಳ್ಳಿ ಗ್ರಾಮದವನಾದ ಸೋಮ ಅಲಿಯಾಸ್ ಕೋತಿ ಸೋಮ ಬಿನ್ ಮರೀಗೌಡ, ಕೊಲೆ ಪ್ರಕರಣದಲ್ಲಿ ಮಂಡ್ಯ 3ನೇ ಎಫ್.ಟಿ.ಸಿ. ನ್ಯಾಯಾಲಯದ ಎಸ್.ಸಿ. ನಂ: 188/2002 ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದು, ಈತನು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿಯಾಗಿದ್ದನು. ಈತ 30 ದಿನಗಳ ಫೆರೋಲ್ ರಜೆ ಮೇಲೆ ತೆರಳಿ 2009 ರ ನವೆಂಬರ್ 1 ರಂದು ವಾಪಸ್ಸು ಕಾರಾಗೃಹಕ್ಕೆ ಶರಣಾಗಬೇಕಾಗಿತ್ತು. ಆದರೆ, ಈತನು ಕಾರಾಗೃಹಕ್ಕೆ ಶರಣಾಗದೆ ಈವರೆವಿಗೂ ತಲೆ
ಮರೆಸಿಕೊಂಡಿರುತ್ತಾನೆ. ಈ ಸಂಬಂಧ ಮೈಸೂರು ನಗರ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸೋಮ ಅಲಿಯಾಸ್ ಕೋತಿ ಸೋಮನನ್ನು ಪತ್ತೆ ಮಾಡಿಕೊಟ್ಟವರಿಗೆ ಅಥವಾ ಈತನ ಬಗ್ಗೆ ಸುಳಿವು ನೀಡಿದವರಿಗೆ ರೂ.50 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಮೈಸೂರು ಪೊಲೀಸ್ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.
ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ, ಸಂಖ್ಯೆ-0821-2418339. ನಜರ್‍ಬಾದ್ ಪೊಲೀಸ್ ಠಾಣಿ ದೂರವಾಣಿ ಸಂಖ್ಯೆ-0821-2418308, ಪೊಲೀಸ್ ನಿರೀಕ್ಷಕರು, ನಜರ್‍ಬಾದ್ ಪೊಲೀಸ್ ಠಾಣೆ, ಮೊಬೈಲ್ ನಂ-9480802233 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು