ಮೈಸೂರು ಲಷ್ಕರ್ ಪೊಲೀಸರ ಕಾರ್ಯಾಚರಣೆ : ಕತ್ತಲೆಯಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಏಳು ಜನರ ಬಂಧನ : ನಗದು, ವಾಹನ, ಮೊಬೈಲ್ ಫೋನ್ ವಶ

ಮೈಸೂರು : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೈಸೂರು ನಗರದಲ್ಲಿ ದಾರಿಹೋಕರು ಮತ್ತು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಏಳು ಜನ ಸುಲಿಗೆ ಕೋರರನ್ನು ಪೊಲೀಸರು ಬಂಧಿಸಿ ಅವರಿಂದ ನಗದು, ವಾಹನ ವಶಕ್ಕೆ ಪಡೆದಿದ್ದಾರೆ.
ಕಳೆದ ನವೆಂಬರ್ 11 ರಂದು ಬೆಳಗ್ಗೆ 5 ಗಂಟೆಗೆ ಮಡಿಕೇರಿಗೆ ಹೋಗುವ ಸಲುವಾಗಿ ವ್ಯಕ್ತಿಯೊಬ್ಬರು ಬೆಂಗಳೂರು-ನೀಲಗಿರಿ ರಸ್ತೆಯ ಮೈಸೂರು ಕಾಂಪ್ಲೇಕ್ಸ್ ಬಳಿ ನಡೆದುಕೊಂಡು ಬರುತ್ತಿದ್ದಾಗ ಒಂದು ಆಟೋದಲ್ಲಿ ಬಂದ ಇಬ್ಬರು ಹೆಂಗಸರು ಸೇರಿದಂತೆ ನಾಲ್ವರು ದುಷ್ಕರ್ಮಿಗಳು ವ್ಯಕ್ತಿಯನ್ನು ಅಡ್ಡಗಟ್ಟಿ ಹೊಡೆದು ಕೆಳಕ್ಕೆ ಬೀಳಿಸಿ ಜೇಬಿನಲ್ಲಿದ್ದ 25 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. 
ಈ ಬಗ್ಗೆ ಪೊಲೀಸರು ನವೆಂಬರ್ 30 ರಂದು ಸುಲಿಗೆ ಮಾಡಿದ್ದ ನಾಲ್ವರನ್ನು ಬಂಧಿಸಿ ಆರೋಪಿಗಳಿಂದ 22 ಸಾವಿರ ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಆಟೋ ರಿಕ್ಷಾವನ್ನು ಅಮಾನತ್ತು ಮಾಡಿಕೊಂಡಿದ್ದಾರೆ. ಮೂವರ ಬಂಧನ : ಮತ್ತೊಂದು ಸುಲಿಗೆ ಪ್ರಕರಣದಲ್ಲಿ ಕಳೆದ ಡಿ.14 ರಂದು ರಾತ್ರಿ ಸುಮಾರು 7.30 ಗಂಟೆ ಸಮಯದಲ್ಲಿ ಬೆಂಗಳೂರು ನೀಲಗಿರಿ ರಸ್ತೆ ಸೆಂಟ್ರಲ್ ಮಾಲ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಆಟೋದಲ್ಲಿ ಬಂದ ಮೂರ್ನಾಲ್ಕು ಜನರ ತಂಡ ಅಡ್ಡಗಟ್ಟಿ ಕುತ್ತಿಗೆಯನ್ನು ಟವಲ್‍ನಿಂದ ಬಿಗಿದು ವ್ಯಕ್ತಿಗೆ ಹೊಡೆದು ಹೆದರಿಸಿ ಆತನ ಪ್ಯಾಂಟ್ ಜೇಬಿನಲ್ಲಿದ್ದ 6,700 ರೂ ನಗದು ಹಣ ಮತ್ತು ಒಂದು ರೆಡ್ ಮೀ ಮೊಬೈಲ್ ಫೋನನ್ನು ಕಿತ್ತುಕೊಂಡು ಆಟೋದಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಮಾರನೇ ದಿನವೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಸುಲಿಗೆ ಮಾಡಿದ್ದ 4 ಸಾವಿರ ಮೌಲ್ಯದ ಮೊಬೈಲ್ ಫೋನ್ ಹಾಗೂ 1,500 ನಗದು ಅಮಾನತ್ತು ಮಾಡಿಕೊಂಡಿರುತ್ತಾರೆ.
ಮೇಲ್ಕಂಡ ಎರಡೂ ಪ್ರಕರಣದ ಪತ್ತೆ ಕಾರ್ಯವನ್ನು ಡಿಸಿಪಿ ಎಂ.ಎಸ್.ಗೀತ, ದೇವರಾಜ ವಿಭಾಗ ಎಸಿಪಿ ಎಂ.ಎನ್. ಶಶಿಧರ್ ಮಾರ್ಗದರ್ಶನದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಪಿ.ಪಿ. ಸಂತೋಷ್, ಪಿಎಸ್‍ಐ ಧನಲಕ್ಷ್ಮಿ ಮತ್ತು ಸಿಬ್ಬಂದಿಗಳಾದ ಪಿ.ಚೇತನ್, ಮಂಜುನಾಥ, ಲಾಳೆಸಾಬ ನದಾಫ್, ಮಂಜುನಾಥ ಗದಗೈಗೋಳ ಭಾಗವಹಿಸಿದ್ದರು.
ಮೈಸೂರು ನಗರದ ಪೊಲೀಸ್ ಆಯುಕ್ತ ಬಿ.ರಮೇಶ್ ಪ್ರಕರಣ ಭೇದಿಸಿದ ಪೊಲೀಸ್ ತಂಡವನ್ನು ಪ್ರಶಂಸಿಸಿರುತ್ತಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು