ಗಮನಸೆಳೆದ ಎಂ.ವೈ.ಎಫ್.ಆಂಗ್ಲ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆ
ಚಾಮರಾಜನಗರ : ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಆಸಕ್ತಿದಾಯಕವಾಗಿಸುವ ಹಾಗೂ ಎಲ್ಲರೂ ಉತ್ಸಾಹದಿಂದ ಕಲಿಯುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಚಟುವಟಿಕೆಯಲ್ಲಿ `ಬಣ್ಣದ ರಂಗೋಲಿಯಲ್ಲಿ ವಿಜ್ಞಾನದ ಚಿತ್ರಗಳು ಹಾಗೂ ಗಣಿತದ ರಚನೆಗಳು ಅರಳುವ ಮೂಲಕ ಕಲಿಕಾ ಚಟುವಟಿಕೆ ಯಶಸ್ವಿಯಾಯಿತು.
ನಗರದ ಎ.ಪಿ. ಮೊಹಲ್ಲಾದಲ್ಲಿರುವ ಎಂ.ವೈ.ಎಫ್.ಆಂಗ್ಲ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಿಜ್ಞಾನ ಹಾಗೂ ಗಣಿತ ವಿಷಯಗಳ ಕಲಿಕಾ ಚಟುವಟಿಕೆಯಲ್ಲಿ 45 ವಿದ್ಯಾರ್ಥಿಗಳು 3 ತಂಡಗಳಾಗಿ ಭಾಗವಹಿಸಿ ವಿಜ್ಞಾನದ ವಿವಿಧ ಚಿತ್ರಗಳು ಮತ್ತು ಗಣಿತದ ಹಲವಾರು ರಚನೆಗಳನ್ನು ಬಣ್ಣದ ರಂಗೋಲಿಯ ಮೂಲಕ ನೆಲದ ಮೇಲೆ ಬಿಡಿಸಿ ಶಿಕ್ಷಕರ ಗಮನಸೆಳೆದರು.
ಅಲ್ಲದೇ ತಾವು ರಚಿಸಿದ ಚಿತ್ರಗಳ ಬಗ್ಗೆ ಸವಿವರವಾದ ಮಾಹಿತಿಯನ್ನೂ ನೀಡಿದ್ದು ಶಿಕಷಕರ ಸಂತೋಷಕ್ಕೆ ಕಾರಣವಾಗಿತ್ತು. ಶಾಲೆಯ ಇತರೆ ತರಗತಿಯ ವಿದ್ಯಾರ್ಥಿಗಳಿಗೂ ಇದನ್ನು ನೋಡಲು ಅವಕಾಶ ಕಲ್ಪಿಸಿದ್ದ ಕಾರಣ ಇದೊಂದು ವಿಜ್ಞಾನ ಮೇಳದ ರೀತಿ ಕಂಡುಬಂತು.
ವಿಜ್ಞಾನ ಹಾಗೂ ಗಣಿತ ಶಿಕ್ಷಕಿ ಎನ್.ಸೌಭಾಗ್ಯ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಈ ಕಲಿಕಾ ಚಟುವಟಿಕೆಯನ್ನು ಶಾಲಾ ಆಡಳಿತಾಧಿಕಾರಿ ಮೊಹಮ್ಮದ್ ಸಾಬಿರ್, ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ವೃಂದದವರು ಪ್ರಶಂಸಿಸಿದರು. ಇಂತಹ ಚಟುವಟಿಕೆಗಳು ಕಲಿಕೆಗೆ ಪೂರಕವಾಗಿ ನಡೆದಾಗ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
0 ಕಾಮೆಂಟ್‌ಗಳು