ಮೇಲುಕೋಟೆ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಗೆ ಭಾರಿ ಜನಬೆಂಬಲ
ಕೆ.ಎಸ್.ಪುಟ್ಟಣ್ಣಯ್ಯ ಪುತ್ಥಳಿಗೆ ಹೆಚ್‍ಡಿಕೆ ಮಾಲಾರ್ಪಣೆ
ಎಂಪಿ ಸೋಲಿಗೆ ರೈತಸಂಘವೂ ಕಾರಣ : ನಿಖಿಲ್ ಬೇಸರ
ನಜೀರ್ ಅಹಮದ್, ಪಾಂಡವಪುರ
ಪಾಂಡವಪುರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಾತಾವರಣ ಸೃಷ್ಟಿಸಬೇಡಿ, ಸ್ವತಂತ್ರವಾಗಿ ಅಧಿಕಾರ ನೀಡಿದರೆ ಪಂಚರತ್ನ ಯೋಜನೆ ಜಾರಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾನ ಮಾಡಿದರು.
ಪಾಂಡವಪುರದ ತಾಲ್ಲೂಕು ಕಚೇರಿ ಎದುರು ಪಂಚರತ್ನ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಫಲಿತಾಂಶ ಅತಂತ್ರವಾದರೆ ಮತ್ತೇ ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಗುತ್ತದೆ. ಅಂತಹ ವಾತಾವರಣವನ್ನು ಸೃಷ್ಟಿ ಮಾಡದೇ ಪೂರ್ಣಾವಧಿ ಸರ್ಕಾರ ಮಾಡಬೇಕು.
123 ಸ್ಥಾನ ಪಡೆಯುವ ಗುರಿಯೊಂದಿಗೆ ಈ ಯಾತ್ರೆ ಆರಂಭಿಸಿದ್ದೇವೆ. ನಮಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಇದು ಐದನೇ ಕ್ಷೇತ್ರ ಪ್ರವಾಸವಾಗಿದ್ದು, ಈ ಕ್ಷೇತ್ರದಲ್ಲಿ ಪುಟ್ಟರಾಜು ಅವರನ್ನು ಭಾರಿ ಅಂತರದೊಂದಿಗೆ ಆಯ್ಕೆ ಮಾಡುವ ಮೂಲಕ ಮತದಾರರು ಜೆಡಿಎಸ್ ಪಕ್ಷಕ್ಕೆ ಶಕ್ತಿ ನೀಡಬೇಕೆಂದು ಮನವಿ ಮಾಡಿದರು.
ಆರೋಗ್ಯ, ಶಿಕ್ಷಣ, ಕೃಷಿ, ಮಹಿಳಾ ಸಬಲೀಕರಣ ಹಾಗೂ ವಸತಿ ಯೋಜನೆಗೆ 1.25 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಅಧಿಕಾರ £ಬಂದ 24 ಗಂಟೆಯೊಳಗೆ ಯೋಜನೆ ಜಾರಿ ಮಾಡಿ ನಾಡಿನ ರೈತರು, ಬಡವರು ಹಾಗೂ ಎಲ್ಲಾ ವರ್ಗದ ಜನರ ಹಿತ ಕಾಯಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
ಕ್ಯಾತನಹಳ್ಳಿಯಲ್ಲಿ ಜನಸಾಗರ:
ಪಂಚರತ್ನ ಯಾತ್ರೆ ಪಾಂಡವಪುರಕ್ಕೂ ಬರುವ ಮುನ್ನ ಕ್ಯಾತನಹಳ್ಳಿ ಗ್ರಾಮಕ್ಕೆ ಬಂದಾಗ ಭಾರಿ ಸಂಖ್ಯೆಯಲ್ಲಿ ಜನಸಾಗರವೇ ಸೇರಿತ್ತು. ಈ ವೇಳೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.
ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ಸಿ.ಎಸ್.ಪುಟ್ಟರಾಜು ಪರ ಘೋಷಣೆಗಳನ್ನು ಮೊಳಗಿಸಿದರು.
ಪುಟ್ಟಣ್ಣಯ್ಯ ಪ್ರತಿಮೆಗೆ ಹೆಚ್ಡಿಕೆ ಮಾಲಾರ್ಪಣೆ:
ಪಂಚರತ್ನ ರಥಯಾತ್ರೆ ಕ್ಯಾತನಹಳ್ಳಿ ಗ್ರಾಮಕ್ಕೆ ಆಗಮಿಸಿದ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಥಯಾತ್ರೆ ವಾಹನದಿಂದ ಕೆಳಗಿಳಿದು ಹಸಿರು ಶಾಲು ಹೊದ್ದು ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ರೈತ ಮುಖಂಡ ಕೆ.ಪಿ.ನಂದೀಶ್ ಅವರು ಕುಮಾರಸ್ವಾಮಿ ಅವರಿಗೆ ಹಸಿರು ಶಾಲು ಹೊದಿಸಿದರು.
ಅದ್ದೂರಿ ಸ್ವಾಗತ: ಪಂಚರತ್ನ ರಥಯಾತ್ರೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್‍ನಿಂದ ಪಾಂಡವಪುರ ತಾಲ್ಲೂಕಿನ ಗಡಿ ನಾರ್ಥ್ ಬ್ಯಾಂಕ್‍ಗೆ ಮಧ್ಯಾಹ್ನ 12.20ಕ್ಕೆ ಪ್ರವೇಶಿಸಿದ ವೇಳೆ ಜೆಡಿಎಸ್ ಕಾರ್ಯಕರ್ತರು ಶಾಸಕ ಪುಟ್ಟರಾಜು ಹಾಗೂ ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.
ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿದ ಕಾರ್ಯಕರ್ತರು ನಾರ್ಥ್ ಬ್ಯಾಂಕ್‍ನಲ್ಲಿ ಒಣ ಹುಲ್ಲಿನ ಹಾರ ಹಾಕಿ ಅಭಿನಂದಿಸಿದರು.
ಕಟ್ಟೇರಿ ವೃತ್ತದ ಎರಡು ಕಡೆಗಳಲ್ಲಿ ಭಾರಿ ಗಾತ್ರದ ಸೇಬಿನ ಹಾರವನ್ನು ಹಾಕಲಾಯಿತು. ಬಳಿಕ ಈಡುಗಾಯಿ ಹೊಡೆಯಲಾಯಿತು. ಕಟ್ಟೇರಿ ಗ್ರಾಮದಲಿ ಕಬ್ಬಿನ ಜಲ್ಲೆಯ ಹಾರ ಹಾಕಲಾಯಿತು. ಜತೆಗೆ ಕ್ಷೇತ್ರದ ಅರಳಕುಪ್ಪೆ ಹಾಗೂ ಹರವು ಗ್ರಾಮದಲ್ಲಿ ಮೂಸಂಬಿ ಹಾರ, ಕ್ಯಾತನಹಳ್ಳಿಯಲ್ಲಿ ಪಟಾವಳಿ ಕಬ್ಬಿನ ಹಾರ ಹಾಕಲಾಯಿತು. ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ಸೇಬಿನ ಹಾರ ಹಾಕಲಾಯಿತು.
ಗಮನ ಸೆಳೆದ ಪಂಚರತ್ನ ಯೋಜನೆಯ ಸ್ತಬ್ಧ ಚಿತ್ರ ಪ್ರದರ್ಶನ : ರೈತಚೈತನ್ಯ ಯಾತ್ರೆಯ ಯೋಜನೆಗಳಾದ
ವಸತಿ ಆಸರೆ, ಯುವ ನವಮಾರ್ಗ ಹಾಗೂ ಮಹಿಳಾ ಸಬಲೀಕರಣ, ಆರೋಗ್ಯ ಸಂಪತ್ತು, ಶಿಕ್ಷಣವೇ ಆಧುನಿಕ ಶಕ್ತಿ. ಈ ಐದು ಯೋಜನೆಗಳ ಕುರಿತು ಸ್ತಬ್ಧ ಚಿತ್ರಗಳು ಸಾರ್ವಜನಿಕರ ಗಮನ ಸೆಳೆಯಿತು. ಪಾಂಡವಪುರದಲ್ಲಿ ಸುಮಾರು 25ಕ್ಕೂ ಹೆಚ್ಚು ಎತ್ತಿನ ಗಾಡಿಗಳ ಮೆರವಣಿಗೆ ಹಾಗೂ ಮಹಿಳೆಯರಾದಿಯಾಗಿ ಭಾರಿ ಜನಸಾಗರ ನೆರೆದಿತ್ತು.
ಹೆಲಿಕ್ಯಾಪ್ಟರ್ ಹಾರಾಟ, ಶಾಮಿಯಾನ ಕುಸಿದು ವ್ಯಕ್ತಿಗೆ ಗಾಯ : ವಿಶ್ವ ರೈತ ದಿನಾಚರಣೆ ಅಂಗವಾಗಿ ಕ್ಯಾತನಹಳ್ಳಿ ಗ್ರಾಮದಲ್ಲಿ ರೈತ ಸಂಘ ಹಾಕಲಾಗಿದ್ದ ಶಾಮಿಯಾನ ಹಾಗೂ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಪ್ಲೆಕ್ಸ್ ಹೆಲಿಕ್ಯಾಪ್ಟರ್‍ನಿಂದ ಬಂದ ಭಾರಿ ಗಾಳಿ ಹಿನ್ನೆಲೆಯಲ್ಲಿ ನೆಲಕ್ಕುರುಳಿದವು. ಈ ವೇಳೆ ಶಾಮಿಯಾನದ ಕಬ್ಬಿಣ ತಗುಲಿದ ಪರಿಣಾಮ ವ್ಯಕ್ತಿಯೊಬ್ಬನ ತಲೆಗೆ ಗಾಯವಾಯಿತು. ತಕ್ಷಣ ಗಾಯಾಳುವನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ಈ ವೇಳೆ ರೈತ ಸಂಘದ ಕಾರ್ಯಕರ್ತರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಡಿದರು.
ಜೆಡಿಎಸ್ ಯುವ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಐದೂ ಕಾಲು ಲಕ್ಷ ಮತ ಪಡೆದಿದ್ದ ಸಿ.ಎಸ್.ಪುಟ್ಟರಾಜು ಗೆಲುವು ಸಾಧಿಸಿದರೆ, ಐದೂ ಮುಕ್ಕಾಲು ಲಕ್ಷ ಮತಗಳನ್ನು ಪಡೆದು ನಾನು ಸೋಲಬೇಕಾಯಿತು. ತಾಂತ್ರಿಕ ಕಾರಣದಿಂದ ನಾನು ಸೋತಿದ್ದರೂ. ಆನರ ಮನಸ್ಸಿನಲ್ಲಿ ಗೆದ್ದಿದ್ದೇನೆ. ನನ್ನ ಸೋಲಿಗೆ ಕಾಂಗ್ರೆಸ್ ಮತ್ತು ರೈತಸಂಘ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿ¸ಸಿದರು.
ಈ ವೇಳೆ ಶಾಸಕ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿ.ಪಂ. ಮಾಜಿ ಸದಸ್ಯ ಸಿ.ಅಶೋಕ್, ಪುಟ್ಟರಾಜು ಪುತ್ರ ಸಿ.ಪಿ.ಶಿವರಾಜ್, ರಾಜ್ಯ ಜೆಡಿಎಸ್ ರೈತ ವಿಭಾಗದ ಮಾಜಿ ಉಪಾಧ್ಯಕ್ಷ ಕ್ಯಾತನಹಳ್ಳಿ ಪ್ರವೀಣ್, ಚೇತನ್, ಜಿ.ಪಂ ಮಾಜಿ ಸದಸ್ಯೆ ಅನುಸೂಯ ದೇವರಾಜು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ಯಾದನಹಳ್ಳಿ ಚಲುವರಾಜು, ಶಂಭೂನಹಳ್ಳಿ ಗುರುಸ್ವಾಮಿ, ವಿಕ್ರಾಂತ್ ಪಾಪೇಗೌಡ ಇತರರಿದ್ದರು.
0 ಕಾಮೆಂಟ್‌ಗಳು