ಅಕ್ರಮ ಖಾತೆ, ಕರ್ತವ್ಯ ಲೋಪ : ಪಂಚಾಯ್ತಿ ಕಾರ್ಯದರ್ಶಿ ಸಸ್ಪೆಂಡ್
ಡಿಸೆಂಬರ್ 29, 2022
ಶ್ರೀರಂಗಪಟ್ಟಣ : ಅಕ್ರಮ ಖಾತೆ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ ಅವರನ್ನು ಜಿಪಂ ಸಿಇಒ ಶಾಂತ ಹುಲ್ಮನಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ. ತಾಲೂಕಿನ ಹೊಸಹುಂಡವಾಡಿ ಗ್ರಾಮದ ಹೆಚ್.ಸಿ ರಘು ಎಂಬುವವರಿಗೆ ಸೇರಿದ್ದ 31*41 ಅಳತೆ ಮನೆಯನ್ನು ಅಕ್ರಮವಾಗಿ ಪುಟ್ಟಲಕ್ಷಮ್ಮ ಮತ್ತು ಚನ್ನೇಗೌಡರವರ ಹೆಸರಿಗೆ ಖಾತೆ ಮಾಡಿರುವ ಬಗ್ಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಜಿಪಂ ಉಪ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಶ್ರೀರಂಗಪಟ್ಟಣ ತಾಪಂ ಇಒ ಅವರ ಜಂಟಿ ಪರಿಶೀಲನ ವೇಳೆ ಹುಲಿಕೆರೆ ಪಂಚಾಯಿತಿ ಕಾರ್ಯದರ್ಶಿ ಎಸ್.ಶಿವಲಿಂಗಯ್ಯ ಅವರು ನಿಯಮ ಬಾಹಿರವಾಗಿ ಇ-ಸ್ವತ್ತು ಮಾಡಿರುವುದು ಕಂಡು ಬಂದಿದೆ. ಜೊತೆಗೆ ಇ-ಸ್ವತ್ತು ನಮೂನೆ 118 ರಲ್ಲಿ ಸ್ವತ್ತಿನ ಸಂಖ್ಯೆ:152100700800720706 ಸ್ವತ್ತಿನ ಸ್ವಾಧೀನತೆ ವಿವರ ಪಿತ್ರಾರ್ಜಿತ ಎಂದು ನಮೂದಾಗಿದ್ದು, ಷರಾದಲ್ಲಿ ಸೇಲ್‍ಡೀಡ್ ಸಂಖ್ಯೆ:70, ದಿನಾಂಕ:23-02-2000 ಎಂದು ನಮೂದಾಗಿರುತ್ತದೆ. ಪರಿಶೀಲನಾ ವೇಳೆ ರಶೀದಿ ಸಂಖ್ಯೆ 413460ರ ರಶೀದಿ ಪುಸ್ತಕವೇ ಇರುವುದಿಲ್ಲ. ಆ ಖಾತೆಗೆ ಸಂಬಂಧಿಸಿದ ಕಡತಗಳು ಸಹ ಲಭ್ಯವಿಲ್ಲದಿರುವುದರಿಂದ ಸದರಿಯವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ದಾಖಲೆಗಳೊಂದಿಗೆ ಜಂಟಿ ಪರಿಶೀಲನಾ ವರದಿಯನ್ನು ಸಲ್ಲಿಸಿರುತ್ತಾರೆ.
ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿರುವುದರಿಂದ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಪಂ ಸಿಇಒ ಶಾಂತ ಹುಲ್ಮನಿ ಆದೇಶ ಹೊರಡಿಸಿದ್ದಾರೆ. ಗ್ರಾ.ಪಂ ಸದಸ್ಯ ಮಂಜುನಾಥ್ ಮಾತನಾಡಿ, ಅಕ್ರಮ ಖಾತೆ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ಹುಲಿಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ ಅವರನ್ನು ಜಿಪಂ ಸಿಇಒ ಶಾಂತ ಹುಲ್ಮನಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ, ನಮ್ಮ ಪಂಚಾಯ್ತಿಯಲ್ಲಿ ಸಾರ್ವಜನಿಕರು ಸೇರಿದಂತೆ ಜುವಾರಿ ಡೆವಲಪರ್ಸ್‍ಗೆ ಸೇರಿದ ನೂರಾರು ಖಾತೆಗಳನ್ನು ಅಕ್ರಮವಾಗಿ ಕಾನೂನು ಭಾಹಿರವಾಗಿ ಮಾಡಲಾಗಿದೆ. ಈ ಅಕ್ರಮ ಖಾತೆಗಳ ವಿರುದ್ದ ನಾನು ಸೇರಿದಂತೆ ನಮ್ಮ ಪಂಚಾಯ್ತಿಯ ಸದಸ್ಯರು ನಿರಂತರ ಹೊರಾಟ ನಡೆಸಿದ್ದೇವೆ ಎಂದು ಮಂಜುನಾಥ್ ಹೇಳಿದರು.
0 ಕಾಮೆಂಟ್‌ಗಳು