15 ದಿನದಲ್ಲಿ ಸಾಗುವಳಿ ಪತ್ರ ನೀಡುವುದಾಗಿ ತಹಶೀಲ್ದಾರ್ ಭರವಸೆ
ನಂಜನಗೂಡು : ತಾಲ್ಲೂಕಿನ ಹರತಲೆ, ಹೆಗ್ಗಡಹಳ್ಳಿ, ಬ್ಯಾಳಾರು ಗ್ರಾಮದ ರೈತರು ಸುಮಾರು 70-80 ದಶಕಗಳಿಂದ ಸಾಗುವಳಿ ಮಾಡುತ್ತಿದ್ದು, ಇದುವರೆಗೂ ಸಾಗುವಳಿ ಪತ್ರವನ್ನು ಕಂದಾಯ ಇಲಾಖೆ ನೀಡಿಲ್ಲ. ಕೂಡಲೇ ಭೂ ಮಂಜೂರಾತಿ ಸಮಿತಿ ಸಭೆ ಕರೆದು ಅರ್ಜಿ ಹಾಕಿರುವ ರೈತರಿಗೆ ಸಾಗುವಳಿ ಪತ್ರವನ್ನು ನೀಡಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಎಐಕೆಕೆಎಂಎಸ್ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಜಮೀನುಗಳನ್ನು ಒಟ್ಟುಗೂಡಿಸಿ ಒಂದೇ ಸರ್ವೇ ನಂಬರ್‍ಗೆ ಸೇರಿಸಲಾಗಿದೆ. ಆ ಜಮೀನುಗಳನ್ನು ಸರ್ವೇ ಮಾಡಿ ದುರಸ್ಥಿ/ಪೋಡ್ ಮಾಡಿಸಿ ರೈತರಿಗೆ ಖಾಯಂ ಸಾಗುವಳಿ ಪತ್ರವನ್ನು ನೀಡಬೇಕು. ತಲಾ ತಲಾಂತರದಿಂದ ಬೆವರು ಸುರಿಸಿ ವ್ಯವಸಾಯ ಮಾಡುತ್ತಿರುವ ಸಾಗುವಳಿದಾರರಿಗೆ ಖಾತೆ ಮಾಡಿಕೊಳ್ಳಲು ಸತಾಯಿಸುತ್ತಿರುವ ಸರ್ಕಾರಗಳು ಬಂಡವಾಳ ಶಾಹಿಗಳಿಗೆ ಲಕ್ಷಾಂತರ ಎಕರೆ ಭೂಮಿಯನ್ನು ಧಾರೆ ಎರೆಯುತ್ತಿವೆ. ಇಂತಹ ನೀತಿಗಳನ್ನು ವಿರೋಧಿಸಿ ಪ್ರಬಲ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಪಿ.ಶಿವಪ್ರಕಾಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ತಹಶಿಲ್ದಾರ್ ಆಗಮಿಸಿ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 79 ರೈತರಿಗೆ ಹಾಗೂ ವರುಣ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 75 ರೈತರಿಗೆ ಸಾಗುವಳಿ ಪತ್ರ ನೀಡಲು ಪಟ್ಟಿಯನ್ನು ತಯಾರಿಸಲಾಗಿದೆ. ಇನ್ನೂ 15 ದಿನದಲ್ಲಿ ಸಾಗುವಳಿ ಪತ್ರವನ್ನು ನೀಡುವುದಾಗಿ ತಿಳಿಸಿದರು.
ಎಐಕೆಕೆಎಂಎಸ್ ಜಿಲ್ಲಾ ಸಂಚಾಲಕ ಎಚ್.ಎಂ. ಬಸವರಾಜು, ವಸಂತ ಕುಮಾರಿ, ಶಿವಣ್ಣ, ಮಹದೇವ, ಹಸರಣ್ಣ, ಮರಮ್ಮ ಮುಂತಾದ ಐವತ್ತಕ್ಕೂ ಹೆಚ್ಚು ಸಾಗುವಳಿದಾರರು ಪ್ರತಿಭಟನೆಯಲ್ಲಿ ಹಾಜರಿದ್ದರು.
0 ಕಾಮೆಂಟ್‌ಗಳು