ಡಾ.ಎನ್.ಎಸ್. ಇಂದ್ರೇಶ್‍ಗೆ ಬಿಜೆಪಿ ಟಿಕೇಟ್ ಗ್ಯಾರಂಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ನಜೀರ್ ಅಹಮದ್, ಪಾಂಡವಪುರ
ಪಾಂಡವಪುರ : ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಎಲ್ಲರನ್ನೂ ನೋಡಿ ಸಾಕಾಗಿರುವ ಜನತೆ ಡಾ.ಎನ್.ಎಸ್.ಇಂದ್ರೇಶ್ ಅವರನ್ನು ಗೆಲ್ಲಿಸುವ ಮೂಲಕ ಈ ಬಾರಿ ಪಾಂಡವಪುರದಲ್ಲಿ ಕಮಲ ಅರಳಿಸುವುದು ಖಚಿತ. ಜತೆಗೆ ರಾಜ್ಯದಲ್ಲೂ ಇತಿಹಾಸ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ಗೋಪೂಜೆ, ಭತ್ತದ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‍ನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮತ ಬ್ಯಾಂಕ್ ಸೃಷ್ಟಿಗೆ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಅದೆಲ್ಲ ಫಲಿಸದು. ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ಜನಪರ ಯೋಜನೆಗಳನ್ನು ಮೆಚ್ಚಿರುವ ಜನರು ಬಿಜೆಪಿಯನ್ನು ಮತ್ತೇ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಜಪ ಮಾಡುತ್ತಿದ್ದು, ಬೆಳಗ್ಗೆ ಎದ್ದರೆ ಸಾಕು ಮೋದಿ ಮೋದಿ ಅಂತಿರುತ್ತಾರೆ. ಡಬಲ್ ಇಂಜಿನ್ ಸರ್ಕಾರ ಏನೇನು ಅಭಿವೃದ್ಧಿ ಮಾಡಿಲ್ಲ ಎನ್ನುವ ಸಿದ್ದರಾಮಯ್ಯ ಅವರಿಗೆ ಪ್ರಧಾನಮಂತ್ರಿ ಮೋದಿವರನ್ನು ಟೀಕೆ ಮಾಡೋದನ್ನು ಬಿಟ್ಟರೆ ಬೇರೆನು ಕೆಲಸವಿಲ್ಲ. ಸಿದ್ದರಾಮಯ್ಯ ಕಣ್ಣು ಬಿಟ್ಟರೆ ಅವರಿಗೆ ಮೋದಿ ಕಾಣಿಸ್ತಾರೆ. ನಾನು ಅನ್ನಭಾಗ್ಯದ ಮೂಲಕ ಜನರಿಗೆ ಅಕ್ಕಿ ಕೊಟ್ಟೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಆದರೆ ಅನ್ನಭಾಗ್ಯದ 30 ರೂ. ಅಕ್ಕಿ ನರೇಂದ್ರಮೋದಿ ಕೊಟ್ಟಿದ್ದು, ಅಕ್ಕಿಯ ಮೇಲಿದ್ದ 3 ರೂ.ಚೀಲ ಮಾತ್ರ ಸಿದ್ದರಾಮಯ್ಯನವರು ಕೊಟ್ಟಿದ್ದು. ಅನ್ನಭಾಗ್ಯದ ಅಕ್ಕಿ ಕನ್ನ ಹೊಡೆದು ಕಾಳಸಂತೆಯಲ್ಲಿ ಮಾರಾಟ ಮಾಡಿ ಭ್ರಷ್ಟಚಾರ ಮಾಡಿದ್ರು. ಎಸ್‍ಸಿ, ಎಸ್‍ಟಿ ಮಕ್ಕಳಿಗೆ ದಿಂಬು, ಹಾಸಿಗೆ ನೀಡುವುದರಲ್ಲೂ ಸಿದ್ದರಾಮಯ್ಯ ಲೂಟಿ ಹೊಡೆದ್ರು, ಸಣ್ಣ, ದೊಡ್ಡ ನೀರಾವರಿ ಯೋಜನೆಗಳಲ್ಲೂ ವ್ಯಾಪಕ ಭ್ರಷ್ಟಚಾರ ನಡೆಸಿದ ಸಿದ್ದರಾಮಯ್ಯ ರಾಜ್ಯದ ಜನರಿಗೆ ದೌರ್ಭಾಗ್ಯ ಒದಗಿಸಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಈಗ ಎಲ್ಲೆಡೆ ಬಿಜೆಪಿ ಪರ್ವ ಆರಂಭಗೊಂಡಿದೆ. ಈಗಾಗಲೆ ಮಂಡ್ಯ ಜಿಲ್ಲೆ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಭಲವಾಗಿದ್ದು ಮಂಡ್ಯ ಜಿಲ್ಲೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಸೇರಿ ನಾಲ್ಕೈದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತವಾಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಡಾ.ಇಂದ್ರೇಶ್ ಉತ್ತಮ ರೀತಿಯಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಬದಲಾವಣೆಯ ಬಿರುಗಾಳಿ ಮಂಡ್ಯ ಜಿಲ್ಲೆಯಿಂದಲೇ ಬೀಸಲಿ. ಡಬಲ್ ಎಂಜಿನ್ ಸರ್ಕಾರ ರೈತರು, ಮಹಿಳೆಯರು, ಯುವಕರ ಪರವಾಗಿ ಯಶಸ್ವಿ ಆಡಳಿತ ನಡೆಸುತ್ತಿದೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ನೀಡಿದ್ದು, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ದಿಯ ಕನಸ್ಸು ಹೊತ್ತು ಕೆಲಸ ಮಾಡುತ್ತಿದ್ದೇವೆ. ರಾಜ್ಯದ 45 ಸಾವಿರ ನೇತಾರರಿಗೆ ತಲಾ 5 ಸಾವಿರ ಹಣ ಹಾಕುವ ಕಾರ್ಯಕ್ರಮಕ್ಕೆ ಈಗಷ್ಟೆ ಚಾಲನೆ ನೀಡಿ ಬಂದಿದ್ದೇನೆ. ಯುವಕರು, ಮಹಿಳಾ ಸಬಲೀಕರಣಕ್ಕೆ 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡುತ್ತಿದ್ದೇವೆ, ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಖಾತೆಗೆ 10 ಸಾವಿರ ನೀಡಿದ್ದು, ಮೇಲುಕೋಟೆ ಕ್ಷೇತ್ರದಲ್ಲಿ ಕನಕ ಹಾಗೂ ಬಸವ ಸಮುದಾಯ ಭವನ ನಿರ್ಮಾಣಕ್ಕೆ ಡಾ.ಇಂದ್ರೇಶ್ ಮಾಡಿರುವ ಮನವಿಯನ್ನು ಪರಿಗಣಿಸಿ, ಜಿಲ್ಲಾಧಿಕಾರಿಗಳ ಮೂಲಕ ವರದಿ ತರಿಸಿಕೊಂಡು ಕ್ರಮ ವಹಿಸುವೆ ಎಂದರು.
``ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿತ್ತು.
ಡಾ.ಎನ್.ಎಸ್.ಇಂದ್ರೇಶ್ ಇತ್ತೀಚೆಗೆ ಪಕ್ಷ ಸೇರ್ಪಡೆಯಾಗಿದ್ದಾರೆ. ನಾವು ಹತ್ತಾರು ವರ್ಷದಿಂದ ಪಕ್ಷವನ್ನು ಕಟ್ಟಿದ್ದೇವೆ ಎಂಬ ಮಾತುಗಳೂ ಸಹ ಕೇಳಿ ಬಂದಿದ್ದವು. ಆದರೆ, ಇಂದು ನಡೆದ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಾ.ಎನ್.ಎಸ್.ಇಂದ್ರೇಶ್ ಮೇಲುಕೋಟೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಎಂದು ಹೇಳುವ ಮೂಲಕ ಎಲ್ಲಾ ಊಹಾಪೂಹಗಳಿಗೆ ತೆರೆ ಎಳೆದಿದ್ದಾರೆ.''
ಜಿಲ್ಲೆಯಲ್ಲಿ ಸ್ಥಗಿತಗೊಂಡು ಬಾಗಿಲು ಮುಚ್ಚಿದ್ದ ಪಿಎಸ್‍ಎಸ್‍ಕೆ ಹಾಗೂ ಮೈಶುಗರ್ ಕಾರ್ಖಾನೆ ಆರಂಭಿಸಿದ್ದು ಬಿಜೆಪಿ ಸರ್ಕಾರ. ಕಾರ್ಖಾನೆ ಆರಂಭಿಸುವಂತೆ ರೈತರು ಚಳವಳಿ ನಡೆಸಿದರಾದರೂ ಯಾವ ಸರ್ಕಾರಗಳು ಸ್ಪಂದಿಸಲಿಲ್ಲ. ಎರಡು ಕಾರ್ಖಾನೆ ಪ್ರಾರಂಭಿಸಲು ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕಾಯಿತು. ಸರ್ಕಾರಿ ಸ್ವಾಮ್ಯದಲ್ಲಿಯೇ ಮೈಶುಗರ್ ಆರಂಭಿಸಿ ಮೊದಲ ಹಂತದಲ್ಲಿ 17 ಕೋಟಿ ರೂ. ಕಬ್ಬಿನ ಬಟವಾಡೆ ಮಾಡಲಾಗಿದೆ. ಇದೀಗ ಮತ್ತೇ 4 ಕೋಟಿ ರೂ. ನೀಡಲಾಗಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಮೈಶುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಆರಂಭಿಸುವ ಮೂಲಕ ಶಾಶ್ವತವಾಗಿ ಈ ಭಾಗದ ರೈತರ ಕಬ್ಬು ನುರಿಸÀಲಾಗುವುದು ಎಂದರು.
ಕೆಆರ್‍ಎಸ್ ಅಣೆಕಟ್ಟೆಯ ತುಕ್ಕು ಹಿಡಿದಿದ್ದ 16 ಗೇಟ್‍ಗಳನ್ನು ದುರಸ್ಥಿಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೆಆರ್‍ಎಸ್‍ನ ಎಲ್ಲಾ ಗೇಟ್ ದುರಸ್ಥಿ ಹೊಸ ಅಣೆಕಟ್ಟೆಯಾಗಿ ಪರಿವರ್ತಿಸಲಾಗುವುದು. ಜಿಲ್ಲೆಯ ಕೊನೆಭಾಗದ ರೈತರಿಗೆ ನೀರೊದಗಿಸಲು 330ಕೋಟಿ ರೂ.ಗಳನ್ನು ವಿಸಿ ನಾಲೆ ಆಧುನೀಕರಣಕ್ಕೂ ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿ 184 ಕೆರೆ ತುಂಬಿಸುವ 450 ಕೋಟಿ ವೆಚ್ಚದ ಯೋಜನೆ ಮಂಜೂರು ಮಾಡಲಾಗುತ್ತಿದೆ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ಭಾರಿ ರಾಜ್ಯದಲ್ಲಿ ಅಧಿಕಾರಕ್ಕೇರುವ ಕನಸ್ಸು ಕಾಣುತ್ತಿದೆ. ಆದರೆ ಬಿಜೆಪಿ ಸ್ಪಷ್ಟ ಬಹುಮತದಿಂದ ಸರ್ಕಾರ ರಚನೆ ಮಾಡಲಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಈ ಹಿಂದೆ ಕಂಡು ಕೇಳರಿಯದ ರೀತಿ ಬಿಜೆಪಿ ಸಂಘಟನೆಯಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಜನಸಂಕಲ್ಪ ಸಭೆಗೆ ಜನರು ಆಗಮಿಸಿದ್ದಾರೆ. ನನ್ನ ಹುಟ್ಟೂರಿನಲ್ಲಿ ಕೆಸಿಎನ್ ಗೆಲ್ಲಿಸಿ ಮಂತ್ರಿ ಮಾಡಿದಂತೆ ಮೇಲುಕೋಟೆಯಲ್ಲಿ ಬಿಜೆಪಿ ಸಂಘಟನೆ ಮಾಡುತ್ತಿರುವ ಇಂದ್ರೇಶ್‍ಗೆ ಶಕ್ತಿ ತುಂಬಬೇಕು. ಆ ಮೂಲಕ ಜಿಲ್ಲೆಯಲ್ಲಿ ಇಂದ್ರೇಶ್ ಜತೆಗೆ ನಾಲ್ಕೈದು ಶಾಸಕರನ್ನು ಕೊಡಬೇಕು ಎಂದು ಹೇಳಿದರು.
ಕಂದಾಯ ಸಚಿವ ಆರ್.ಅಶೋಕ್,
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮಾತನಾಡಿದರು.
ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಬಿಜೆಪಿ ಕ್ಷೇತ್ರಾಧ್ಯಕ್ಷ ಅಶೋಕ್, ಎಂಎಲ್‍ಸಿ ರವಿಕುಮಾರ್, ಜಗದೀಶ್ ಹಿರೇಮನಿ, ಬಿಜೆಪಿ ಮುಖಂಡರಾದ ಡಾ.ಎನ್.ಎಸ್.ಇಂದ್ರೇಶ್, ಅಶೋಕ್‍ಜಯರಾಮು, ಡಾ.ಸಿದ್ದರಾಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಮಹಿಳಾ ಕಾರ್ಯದರ್ಶಿ ಮಂಗಳನವೀನ್‍ಕುಮಾರ್ ಇತರರಿದ್ದರು.
0 ಕಾಮೆಂಟ್‌ಗಳು