ಮನಃ ಪರಿರ್ತನೆಯಾದ ಭಯೋತ್ಪಾದಕರನ್ನೂ ಬಿಜೆಪಿಗೆ ಸೇರಿಸಿಕೊಳ್ಳುವಿರಾ? ಸಿ.ಟಿ.ರವಿಗೆ ಕುಟುಕಿದ ಎಂ.ಲಕ್ಷ್ಮಣ್

ಮೈಸೂರು : ರೌಡಿಗಳು ಮನಃ ಪರಿವರ್ತನೆಯಾಗಿ ಪಕ್ಷ ಸೇರ್ಪಡೆಗೊಂಡರೆ ತಪ್ಪೇನು ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥನೆಯನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನಿಸಿದ್ದು, ಹಾಗಿದ್ದರೆ, ಭಯೋತ್ಪಾದಕರು ಮನಃ ಪರಿವರ್ತನೆಯಾದರೆ, ನಿಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸುತ್ತೀರಾ? ಎಂದು ಕುಟುಕಿದರು. 
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,
2018ರ ಏ.1 ರವರೆಗೆ ರಾಜ್ಯದಲ್ಲಿ 23 ಸಾವಿರ ರೌಡಿ ಶೀಟರ್‍ಗಳಿದ್ದರು. 2022 ಜೂನ್ ಅಂತ್ಯಕ್ಕೆ ಈ ಪ್ರಮಾಣ 33 ಸಾವಿರಕ್ಕೆ ಏರಿಕೆಯಾಗಿದೆ. 2018 ರಲ್ಲಿ ಬೆಂಗಳೂರಿನಲ್ಲಿದ್ದ ರೌಡಿ ಶೀಟರ್‍ಗಳ ಸಂಖ್ಯೆ 3 ಸಾವಿರ. 2022ಕ್ಕೆ ಈ ಪ್ರಮಾಣವು 6,620ಕ್ಕೆ ಏರಿಕೆಯಾಗಿದೆ. ಈ ಪೈಕಿ ಈಗಲೂ ರಾಜ್ಯದಲ್ಲಿ 8 ಸಾವಿರ, ಬೆಂಗಳೂರಿನಲ್ಲಿ 1 ಸಾವಿರ ಮಂದಿ ಅಪರಾಧ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ. ಇವರಲ್ಲಿ 36 ರೌಡಿಶೀಟರ್‍ಗಳನ್ನು ಬಿಜೆಪಿ ತನ್ನ ಪಕ್ಷಕ್ಕೆ ಬರಮಾಡಿಕೊಂಡಿದೆ. ಇನ್ನೂ 60 ಪ್ರಮುಖ ರೌಡಿಶೀಟರ್‍ಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಪ್ರಕ್ರಿಯೆ ನಡೆಯುತ್ತಿದೆ’ ಎಂದು ಈ ಸಂಬಂಧ ದಾಖಲೆಗಳನ್ನು ಬಿಡುಗಡೆಗೊಳಿಸಿ ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.
‘ಈಗಾಗಲೇ ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ, ನಾಗಮಂಗಲದ ಫೈಟರ್ ರವಿ, ಬೆತ್ತನಗೆರೆ ಶಂಕರ ಅಲಿಯಾಸ್ ನಲ್ಲೂರು ಶಂಕರೇಗೌಡ, ಒಂಟೆ ರೋಹಿತ್, ಕುಣಿಗಲ್ ಗಿರಿ, ಮಂಜುನಾಥ್ ಅಲಿಯಾಸ್ ಉಪ್ಪಿ ಬಿಜೆಪಿ ಸೇರಿದ್ದಾರೆ. ಇವರಲ್ಲಿ  ಮಂಜುನಾಥ್‍ನನ್ನು ಆನೇಕಲ್ ಪುರಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಉಳಿದಂತೆ ಶಾಸಕ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿರಣ್ ಗೌಡ ಪಕ್ಷದಲ್ಲಿರುವ ರೌಡಿಶೀಟರ್‍ಗಳಾಗಿದ್ದಾರೆ ಎಂದು ಆರೋಪಿಸಿದರು.
‘ಗೃಹಮಂತ್ರಿ ಅಮಿತ್ ಶಾ, ಆರ್‍ಎಸ್‍ಎಸ್ ಸೂಚನೆಯಂತೆ, ಬೆಂಗಳೂರಿನ ಚಾಮರಾಜಪೇಟೆ, ಮೈಸೂರಿನ ನರಸಿಂಹರಾಜ ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಲಿಡಲು ಸಾಧ್ಯವಾಗದ ಕ್ಷೇತ್ರಗಳಿವೆ. ಅಲ್ಲಿ ಈ ರೌಡಿಶೀಟರ್‍ಗಳನ್ನು ಪಕ್ಷ ಬಳಸಿಕೊಳ್ಳಲಿದೆ ಎಂದು ಬಿಜೆಪಿ ನಾಯಕರೇ ನನಗೆ ಮಾಹಿತಿ ನೀಡಿದ್ದಾರೆ. ಈ ರೌಡಿಶೀಟರ್‍ಗಳ ಪೈಕಿ 10 ವಿಧಾನಸಭಾ ಕ್ಷೇತ್ರ, ಬಿಬಿಎಂಪಿಯಲ್ಲಿ 25 ಮಂದಿಯನ್ನು ಬಿಜೆಪಿಯಿಂದ ಕಣಕ್ಕಿಳಿಸಲಿದೆ ಎಂದು ಲಕ್ಷ್ಮಣ್ ವಿವರಿಸಿದರು.
ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಪದಾಧಿಕಾರಿ ಬಿ.ಎಂ.ರಾಮು, ಮಾಧ್ಯಮ ಮುಖ್ಯಸ್ಥ ಮಹೇಶ್, ಹಿಂದುಳಿದ ವರ್ಗದ ಕಾರ್ಯದರ್ಶಿ ಮಹೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು