ಮೈಸೂರು: ನಗರದ ಸಾತಗಳ್ಳಿ ಬಸ್ ನಿಲ್ದಾಣದ ವಾಣಿಜ್ಯ ಕಟ್ಟಡವನ್ನು ವಶಕ್ಕೆ ಪಡೆಯಲು ಹೋಗಿದ್ದ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿದ್ದ ಮಹಿಳೆ ಮತ್ತು ಆಕೆಯ ಪತಿಯನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಮುಖಂಡ ಶಫಿ ಅಹಮ್ಮದ್ ಮತ್ತು ಆತನ ಪತ್ನಿ ಮುನೀಮುನ್ನಿಸಾ ಬಂಧಿತರು. ಸಾತಗಳ್ಳಿ ಬಳಿಯ ಕೆಎಸ್‍ಆರ್‍ಟಿಸಿ ವಾಣಿಜ್ಯ ಸಂಕೀರ್ಣವನ್ನು 12 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದಿದ್ದ ಶಫಿ, ಬಾಡಿಗೆಯನ್ನು ಸರಿಯಾಗಿ ಪಾವತಿಸದೇ ನ್ಯಾಯಾಲಯದಲ್ಲಿ ದಾವೇ ಹೂಡಿ ಮದ್ಯಂತರ ತಡೆ ಆದೇಶ ತಂದಿದ್ದರು. ಈ ಆದೇಶವನ್ನು ನ್ಯಾಯಾಲಯವು ರದ್ದುಪಡಿಸಿದ್ದರಿಂದ ಅಧಿಕಾರಿಗಳು ಬಾಡಿಗೆದಾರರಿಗೆ ನೋಟಿಸ್ ಜಾರಿ ಮಾಡಿ ವಾಣಿಜ್ಯ ಸಂಕೀರ್ಣವನ್ನು ವಶಕ್ಕೆ ಪಡೆಯಲು ಹೋದಾಗ ಬಾಡಿಗೆದಾರ ಶಫಿ ಮತ್ತು ಅವರ ಪತ್ನಿ ಸೇರಿದಂತೆ ಇನ್ನಿಬ್ಬರು ಮಹಿಳೆಯರು ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಚ್ಚನ್ನು ಮೇಲಕ್ಕೆತ್ತಿ ಝಳಪಿಸಿ ಕತ್ತ್ತರಿಸಿ ಹಾಕಿಬಿಡುವುದಾಗಿ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಿದ್ದರು.
0 ಕಾಮೆಂಟ್‌ಗಳು