ಪದವಿ ಫಲಿತಾಂಶ ಪ್ರಕಟಿಸುವಂತೆ ಎನ್‍ಎಸ್‍ಯುಐ ಪ್ರತಿಭಟನೆ : ತರಗತಿ ಬಹಿಷ್ಕಾರ ಡಿಸಿಗೆ ಮನವಿ
ಡಿಸೆಂಬರ್ 17, 2022
ಮಂಡ್ಯ : ಪದವಿ ಪರೀಕ್ಷೆ ಬರೆದು 8 ತಿಂಗಳಾದರೂ ವಿಶ್ವವಿದ್ಯಾನಿಲಯಗಳು ಫಲಿತಾಂಶವನ್ನೆ ನೀಡದ ಕಾರಣ ಸರ್ಕಾರವೇ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿ ಎನ್‍ಎಸ್‍ಯುಐ ಸಂಘಟನೆಯಿಂದ ನಗರದಲ್ಲಿ ಎಲ್ಲಾ ಕಾಲೇಜುಗಳ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು. ಬಾಲಕರ ಕಾಲೇಜಿನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಕೃಷ್ಣ ಅವರಿಗೆ ಮನವಿ ಸಲ್ಲಿಸಿ ಶೀಘ್ರದಲ್ಲೇ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ನೆರವಾಗುವಂತೆ ಒತ್ತಾಯಿಸಿದರು. ಪದವಿ ಪರೀಕ್ಷೆಗಳು ಮುಗಿದು 6 ರಿಂದ 8 ತಿಂಗಳು ಕಳೆದಿವೆ. ಫಲಿತಾಂಶ ನೀಡದ ಕಾರಣ ಮುಂದಿನ ಸೆಮಿಸ್ಟರ್‍ಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಜರುಗಿಸದೆ ವಿದ್ಯಾರ್ಥಿಗಳ ಭವಿಷ್ಯನ್ನು ಹಾಳು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು. 2022-23 ರ ಸಾಲಿನಲ್ಲಿ ಫ್ರೀ ಮೆಟ್ರಿಕ್ ಹಾಗೂ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕಾಗಿ ಎನ್.ಎಸ್.ಪಿ ವಿದ್ಯಾರ್ಥಿ ವೇತನ ಪೋರ್ಟಲ್ ಹಾಗೂ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಯಾವುದೇ ರೀತಿಯ ವಿದ್ಯಾರ್ಥಿ ವೇತನ ನೀಡಿರುವುದಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನೂ ಸಹ ಏಕಾಏಕಿ ತಡೆಹಿಡಿದು, ಕಾಲೇಜಿನ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದರೂ ಸರ್ಕಾರ ಈ ಬಗ್ಗೆ ನಿಗಾ ವಹಿಸುತ್ತಿಲ್ಲ. ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪದವಿ ಕಾಲೇಜಗಳಿಗೆ ಅಳವಡಿಸಿರುವ ಹೊಸ ಶಿಕ್ಷಣ ನೀತಿ ಅವೈಜ್ಞಾನಿಕವಾಗಿದೆ. ಕಾಲೇಜುಗಳಲ್ಲಿ ಈಗಿರುವ ವಿದ್ಯಾರ್ಥಿಗಳಿಗೆ ಕೂರಲು ಸೂಕ್ತವಾದ ಕೊಠಡಿಗಳಿಲ್ಲ, ಮೊದಲು ಈ ಸಮಸ್ಯೆಗಳನ್ನು ಪರಿಹರಿಸಿ ಎಂದು ಪ್ರತಿಭಟನಾಕಾರರು ದೂರಿದರು.ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ಮನೋರಂಜನ್ ಇನ್ನಿತರರು ಇದ್ದರು.
ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿ, ದರವನ್ನು ಏರಿಕೆ ಮಾಡಿರುವುದು ಅನ್ಯಾಯ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮನೋರಂಜನ್, ಎನ್‍ಎಸ್‍ಯುಐ ಮಂಡ್ಯ ಜಿಲ್ಲಾಧ್ಯಕ್ಷ
0 ಕಾಮೆಂಟ್‌ಗಳು