ಮೇಲುಕೋಟೆ ಕ್ಷೇತ್ರವನ್ನು ಕಾಂಗ್ರೆಸ್‌ ಪಕ್ಷ ಬೇರೆಯವರಿಗೆ ಅಡಮಾನ ಇಟ್ಟಿದೆ : ಸಿ.ಡಿ.ಗಂಗಾಧರ್‌ಗೆ ಟಾಂಗ್‌ ನೀಡಿದ ಶಾಸಕ ಪುಟ್ಟರಾಜು

ಪಾಂಡವಪುರ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಮೊದಲು ಮೇಲುಕೋಟೆ ವಿಧಾನಸಭಾ ಕ್ಷೇತ್ರವನ್ನು ಬೇರೆಯವರಿಗೆ ಅಡಮಾನ ಇಡುವುದನ್ನು ಬಿಡಬೇಕು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಟಾಂಗ್‌ ನೀಡಿದರು. ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿಗಳನ್ನು ಉದ್ಘಾಟಿಸಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ ಅವರ ʻಪುಟ್ಟರಾಜು ಕಪಟ ನಾಟಕದ ಸೂತ್ರಧಾರʼ ಎಂಬ ಹೇಳಿಕೆ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಮೊದಲು ಕಾಂಗ್ರೆಸ್‌ ನವರು ಮೇಲುಕೋಟೆ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಹಾಕಲಿ, ನಾನು ಕಪಟ ನಾಟಕ ಸೂತ್ರಧಾರನಾಗಿದ್ದಕ್ಕೆ ಕ್ಷೇತ್ರದ ಜನರು ಮೂರು ಬಾರಿ ಶಾಸಕರನ್ನಾಗಿ, ಒಮ್ಮೆ ಸಂಸದನಾಗಿ, ಸಚಿವನಾಗಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರನ್ನಾಗಿ ಮಾಡಿದ್ದು ಎಂದು ವ್ಯಂಗ್ಯವಾಡಿದರು.
ಟೆಂಡರ್ ಪ್ರಕ್ರಿಯೆ ಕಾನೂನುಬದ್ದವಾಗಿ ನಡೆಯುತ್ತಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಗಂಗಾಧರ ಬೇಕಿದ್ದರೆ ನಾಳೆಯೇ ಟೆಂಡರ್ ಹಾಕಿ ಕೆಲಸ ಪಡೆದುಕೊಳ್ಳಲಿ, ಅದಕ್ಕೆ ಏನು ಬೇಕೋ ಆ ವ್ಯವಸ್ಥೆ ಮಾಡೋಣ.  25-30 ಕೋಟಿ ಕೆಲಸಕ್ಕೆ ಟೆಂಡರ್ ಮಾಡಿಸುತ್ತಿದ್ದೇನೆ. ಅದಕ್ಕೆ ಟೆಂಡರ್ ಹಾಕಿಕೊಳ್ಳಲಿ ಯಾರು ಬೇಡ ಅಂದಿದ್ದಾರೆ. ಗೊತ್ತಿಲ್ಲದಿದ್ದರೆ ಅವರ ನಾಯಕರಾದ ಚಲುವರಾಯಸ್ವಾಮಿ ಸಚಿವರಾಗಿದ್ದರಲ್ಲ, ಅವರನ್ನೇ ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.
ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ಹೌದು ದಬ್ಬಾಳಿಕೆ ನಡೆಸಿದಕ್ಕೆ ಪುನೀತೋತ್ಸವ ಕಾರ್ಯಕ್ರಮಕ್ಕೆ ನಾವು ಬೇಡ ಅಂದರೂ ಸಾಗರೋಪಾದಿ ಜನರು ಬಂದಿದ್ದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು