ಟನ್ ಕಬ್ಬಿಗೆ 50 ರೂ. ಹೆಚ್ಚಳ ಮಾಡುವ ಸಕ್ಕರೆ ಸಚಿವರ ಪ್ರಸ್ತಾಪ ತಿರಸ್ಕರಿಸಿದ ಕುರುಬೂರು ಶಾಂತಕುಮಾರ್ : 14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ, ನಾಳೆ ಮುಖ್ಯಮಂತ್ರಿ ಜತೆ ಮಾತುಕತೆ
ಡಿಸೆಂಬರ್ 05, 2022
ಬೆಂಗಳೂರು : ಕಬ್ಬಿನ ಉಪ ಉತ್ಪನ್ನಗಳಿಂದ ಬರುವ ಲಾಭದಲ್ಲಿ ಒಂದು ಟನ್‍ಗೆ 50 ರೂ. ಮೊದಲ ಕಂತಾಗಿ ನೀಡುವ ಸಕ್ಕರೆ ಸಚಿವರ ಪ್ರಸ್ತಾಪವನ್ನು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿರಸ್ಕರಿಸಿ ಸಭೆಯಿಂದ ಹೊರನಡೆದ ಘಟನೆ ನಡೆಯಿತು. ಕಬ್ಬಿನ ಎಫ್‍ಆರ್‍ಪಿ ದರ ಪರಿಷ್ಕರಣೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ ಇಂದು 14ನೇ ದಿನಕ್ಕೆ ಕಾಲಿಟ್ಟಿದ್ದು. ಇಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ಕಬ್ಬು ಖರೀದಿ ಮಂಡಳಿ ಸಭೆ ನಡೆಯಿತು. ಸಭೆಯಲ್ಲಿ ಸಕ್ಕರೆ ಸಚಿವರು ಮಾತನಾಡಿ, ಕಬ್ಬಿನ ಉಪ ಉತ್ಪನ್ನಗಳಿಂದ ಕಾರ್ಖಾನೆಗಳಿಗೆ ಒಂದು ಟನ್ ಕಬ್ಬಿಗೆ 126 ರೂ. ಲಾಭ ಬರುತ್ತಿದ್ದು, ಇದರಲ್ಲಿ ರೈತರಿಗೆ ಮೊದಲ ಕಂತಾಗಿ 50 ರೂ. ಕೊಟ್ಟು, ಉಳಿದ ಹಣವನ್ನು ನಂತರ ಕೊಡುವ ಬಗ್ಗೆ ಆದೇಶ ಮಾಡುವುದಾಗಿ ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಹೇಳಿದಾಗ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಈ ಪ್ರಸ್ತಾಪವನ್ನು ತಿರಸ್ಕರಿಸಿ ಸಭೆಯಿಂದ ಹೊರ ನಡೆದರು. ಇದಕ್ಕೂ ಮುನ್ನ ಕುರುಬೂರು ಸಭೆಯಲ್ಲಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ವಿವಿಧ ರೀತಿಯಲ್ಲಿ ಸಹಾಯ, ತೆರಿಗೆ ವಿನಾಯ್ತಿ ನೀಡುತ್ತಿದೆ. ಆದರೆ, ಕಾರ್ಖಾನೆ ಮಾಲಿಕರು ರೈತರಿಗೆ ಸೂಕ್ತ ಬೆಲೆ ನೀಡುತ್ತಿಲ್ಲ. ಇಳುವರಿಯಲ್ಲೂ ಮೋಸವಾಗುತ್ತಿದೆ. ಬೇರೆ, ಬೇರೆ ರಾಜ್ಯಗಳು ನೀಡುವ ದರವನ್ನು ಪರಿಶೀಲಿಸಿ ದರ ನಿಗದಿ ಮಾಡಬೇಕು. ಕಬ್ಬು ಕಟಾವು ಮತ್ತು ಸಾಗಾಣಿಕೆ ದರವನ್ನು ಕಾರ್ಖಾನೆ ಮಾಲಿಕರು 250 ರಿಂದ 300 ರೂಗಳ ತನಕ ಹೆಚ್ಚಿಸಿದ್ದಾರೆ. ಇದು ರೈತರಿಗೆ ಹೊರೆಯಾಗುತ್ತಿದೆ. ಇದನ್ನು ಕಡಿಮೆಮಾಡಬೇಕು ಎಂದು ಒತ್ತಾಯಿಸಿದರು. ನಾಳೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ಸಕ್ಕರೆ ಸಚಿವರು ಹೇಳಿದ್ದಾರೆಂದು ಕುರುಬೂರು ಶಾಂತಕುಮಾರ್ ಮೈಸೂರ್ ಮೇಲ್.ಕಾಂ ಚಾನಲ್‍ಗೆ ತಿಳಿಸಿದರು. ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲ್ಕರಿ, ಕಬ್ಬು ಖರೀದಿ ಮಂಡಳಿ ಸದಸ್ಯರು ಹಾಜರಿದ್ದರು.
0 ಕಾಮೆಂಟ್‌ಗಳು