ಗದ್ದೆ, ಹೊಲ, ಪಾಳು ಬಾವಿಗಳು, ಬೆಟ್ಟ, ಗುಡ್ಡದಲ್ಲಿ ಹುಡುಕಾಟ
ಮೈಸೂರು : ಇಬ್ಬರನ್ನು ಬಲಿ ಪಡೆದ ನರಭಕ್ಷಕ ಚಿರತೆ ಸೆರೆಗೆ ಕಾರ್ಯಾಚರಣೆ ತೀವ್ರಗೊಂಡಿದ್ದು, ಚಿರತೆ ಹಾವಳಿ ಹೆಚ್ಚಾಗಿರುವ ಟಿ.ನರಸೀಪುರ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳ ಜಮೀನಿನಲ್ಲಿ ಬೆಳೆದು ನಿಂತ ಕಬ್ಬು ಕಟಾವು ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಟಿ.ನರಸೀಪುರದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದು, ಆದರೆ, ಇಲ್ಲಿನ ನೂರಾರು ಎಕರೆ ಜಮೀನುಗಳಲ್ಲಿ ಬೆಳೆದಿರುವ ಕಬ್ಬಿನ ಗದ್ದೆಗಳಲ್ಲಿ ಚಿರತೆಗಳು ಅವಿತಿರುವ ಶಂಕೆ ವ್ಯಕ್ತವಾಗಿದೆ. ಕಬ್ಬು ಕಟಾವು ಮಾಡಿದರೆ ಚಿರತೆ ಸೆರೆ ಸಾಧ್ಯ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಹಿನ್ನೆಲೆ ಜಿಲ್ಲಾಧಿಕಾರಿಯಿಂದ ಈ ಆದೇಶ ಹೊರಬಿದ್ದಿದೆ.
ಇದರಿಂದ ಆದಷ್ಟು ಬೇಗ ಪಕ್ವಗೊಂಡಿರುವ ಕಬ್ಬನ್ನು ಆದ್ಯತೆ ಮೇರೆಗೆ ಕಟಾವು ಮಾಡಲು ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಸೂಚನೆ ನೀಡಿದ್ದಾರೆ.
ಟಿ.ನರಸೀಪುರ ತಾಲ್ಲೂಕು ವ್ಯಾಪ್ತಿಯಲ್ಲಿ 195 ಗ್ರಾಮಗಳಿದ್ದು ಈ ಪೈಕಿ 23 ಪಂಚಾಯಿತಿಗಳ 40 ಗ್ರಾಮಗಳ ಕಬ್ಬಿನ ಬೆಳೆಯನ್ನು ಸಕಾಲದಲ್ಲಿ ಕಟಾವು ಮಾಡಿದ್ದಲ್ಲಿ ಚಿರತೆ ಸೆರೆಹಿಡಿಯವ ಕಾರ್ಯಕ್ಕೆ ಅನುಕೂಲವಾಗುತ್ತದೆ. ಎಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.
ಈ ಹಿನ್ನೆಲೆ ಸಾರ್ವಜನಿಕರ ಹಾಗೂ ಜೀವಸಂಕುಲಗಳ ಪ್ರಾಣಹಾನಿ ತಡೆಯಲು ಹಾಗೂ ಸಾರ್ವಜನಿಕರಲ್ಲಿ ಚಿರತೆ ದಾಳಿ ಬಗ್ಗೆ ಭಯ
ಹೋಗಲಾಡಿಸಲು ಚಿರತೆ ಸೆರೆ ಹಿಡಿಯಬೇಕಾಗಿರುವುದರಿಂದ ಟಿ.ನರಸೀಪುರ ತಾಲ್ಲೂಕು ವ್ಯಾಪ್ತಿಯಲ್ಲಿನ 23 ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ತುರುಗನೂರು, ಯಾಚನಹಳ್ಳಿ, ಮಾರಗೌಡನಹಳ್ಳಿ, ದಾಸೇಗೌಡನಹಳ್ಳಿ, ಸಿ.ವಿ.ಕಪ್ಪು, ಕೇತುಪುರ, ಉಕ್ಕಲಗೆರೆ, ಎಂ.ಎಲ್.ಹುಂಡಿ, ಸೋಮನಾಥಪುರ, ಕಗ್ಗಲೀಪುರ, ದೊಡ್ಡಬಾಗಿಲು, ಹೊರಳಹಳ್ಳಿ, ಕರುಗಹಳ್ಳಿ, ಚಿದರವಳ್ಳಿ, ಎಸ್.ದೊಡ್ಡಪುರ, ಬೋಳೇಗೌಡನಹುಂಡಿ, ಕಂಪನಪುರ, ರಾಮೇಗೌಡನಪುರ, ಚಿಕ್ಕಕಲ್ಕುಣಿ, ನರಗ್ಯಾತನಹಳ್ಳಿ, ಹಲವಾರ, ಚಿಟಿಗಯ್ಯನಕೊಪ್ಪು, ನಾಗಲಗೆರೆ, ಮುಸುವಿನಕೊಪ್ಪು, ಸೋಸಲೆ, ಬೆನಕನಹಳ್ಳಿ, ವೀರಪ್ಪೋಡೆಯರ್ ಹುಂಡಿ, ಕಾಳಬಸವನ ಹುಂಡಿ, ಕುರುಬಾಳನಹುಂಡಿ, ಗಾಡಿಜೋಗಿಹುಂಡಿ, ಮಾದಿಗಹಳ್ಳಿ, ಸುಜಲೂರು, ಹ್ಯಾಕನೂರು, ತುಂಬಲ, ಯರಗನಹಳ್ಳಿ, ಸೀಹಳ್ಳಿ, ಮಾದಾಪುರ, ಹಿರಿಯೂರು, ಮೂಗೂರು, ಕೂಡೂರು ಸೇರಿದಂತೆ ಒಟ್ಟು 40 ಗ್ರಾಮಗಳಲ್ಲಿ ರೈತರು ಬೆಳೆದಿರುವ ಪಕ್ವಗೊಂಡಿರುವ ಕಬ್ಬನ್ನು ಮೊದಲ ಆದ್ಯತೆ ಮೇಲೆ ಜರೂರಾಗಿ ಕಟಾವು ಮಾಡಿಸಿ ಕಾರ್ಖಾನೆಗೆ ಸಾಗಾಣಿಕೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಆದೇಶಿಸಿದ್ದಾರೆ.
ಕಳೆದ ಅಕ್ಟೋಬರ್, 31 ರಂದು ಸೋಸಲೆ ಹೋಬಳಿ ಎಂ.ಎಲ್.ಹುಂಡಿ ಗ್ರಾಮದ ವಾಸಿ ಮಂಜುನಾಥ್ ಬಿನ್ ಚನ್ನಮಲ್ಲದೇವು ಎಂಬ ಯುವಕ ಹಾಗೂ ಡಿಸೆಂಬರ್, 1 ರಂದು ಎಸ್.ಕೆಬ್ಬೆಹುಂಡಿ ಗ್ರಾಮದ ಮೇಘನಾ ಎಂಬ ಯುವತಿಯು ಚಿರತೆ ದಾಳಿಯಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರು.